ಬೆಂಗಳೂರು: ನಾಯಕತ್ವ ಬದಲಾವಣೆಯ ಗಾಢ ಕರಿಛಾಯೆ ಮಧ್ಯೆ ಬಿ.ಎಸ್.ಯಡಿಯೂರಪ್ಪ ಸರ್ಕಾರ ತನ್ನ 2 ವರ್ಷದ ಆಡಳಿತಾವಧಿಯನ್ನು ಪೂರೈಸುತ್ತಿದೆ. 2 ವರ್ಷದ ಸಂಭ್ರಮಾಚರಣೆಗಿಂತ ಸಚಿವ ಸಂಪುಟದಲ್ಲಿ ನಾಯಕತ್ವ ಬದಲಾವಣೆಯ ಅನಿಶ್ಚಿತತೆಯ ಆತಂಕವೇ ಹೆಚ್ಚಾಗಿದೆ.
ನಾಳೆ (ಜು.26) ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಲಿದೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 2 ವರ್ಷದ ತಮ್ಮ ಸರ್ಕಾರದ ಸಾಧನೆ, ಸವಾಲುಗಳ ಬಗ್ಗೆ ಯಡಿಯೂರಪ್ಪ ಮೆಲುಕು ಹಾಕಲಿದ್ದಾರೆ.
ಸಚಿವ ಸಂಪುಟದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನೇಕ ವೈರುಧ್ಯ, ಗೊಂದಲ, ಬಂಡಾಯಗಳ ಮಧ್ಯೆ ಯಡಿಯೂರಪ್ಪ ನೇತೃತ್ವದ ಸರ್ಕಾರ ತನ್ನ ಆಡಳಿತದ 2ನೇ ವರ್ಷವನ್ನು ಪೂರೈಸುತ್ತಿದೆ. ಆದರೆ 2 ವರ್ಷದ ಸಂಭ್ರಮಾಚರಿಸಬೇಕಾದ ಯಡಿಯೂರಪ್ಪ ನೇತೃತ್ವದ ಸಂಪುಟ ನಾಯಕತ್ವ ಬದಲಾವಣೆ ಎಂಬ ಅನಿಶ್ಚಿತತೆಗೆ ಒಳಗಾಗಿದೆ.
ನಾಯಕತ್ವ ಬದಲಾವಣೆಯ ಆತಂಕ:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಅಧಿಕಾರದಲ್ಲಿ 2 ವರ್ಷ ಪೂರೈಸಿರುವ ಸಂತಸದ ಬದಲು ನಾಯಕತ್ವ ಬದಲಾಗುವ ಆತಂಕವೇ ಆವರಿಸಿದೆ. ಸೋಮವಾರದೊಳಗೆ ಹೈಕಮಾಂಡ್ನಿಂದ ಒಂದು ಸಂದೇಶ ಬರಲಿದೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹೇಳುವ ಮೂಲಕ ಸಚಿವ ಸಂಪುಟ ಸದಸ್ಯರಿಗೆ ಆಘಾತ ನೀಡಿದ್ದಾರೆ. ಭಾನುವಾರ ಅಥವಾ ಸೋಮವಾರ ದೆಹಲಿ ಹೈಕಮಾಂಡ್ ಸಿಎಂ ಯಡಿಯೂರಪ್ಪಗೆ ಪದತ್ಯಾಗದ ಸಂದೇಶ ನೀಡಲಿದ್ದಾರೆ ಎಂಬ ಗೊಂದಲ, ಆತಂಕ ಸಚಿವರಲ್ಲಿ ಮನೆ ಮಾಡಿದೆ.
ಇತ್ತ ಸಿಎಂ ಯಡಿಯೂರಪ್ಪ ಕೂಡ ಹೈಕಮಾಂಡ್ ಸಂದೇಶದ ನಿರೀಕ್ಷೆಯಲ್ಲಿದ್ದು, ಏನೇ ಸಂದೇಶ ಬಂದರೂ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದರೆ ಪದತ್ಯಾಗಕ್ಕೆ ಮನಸ್ಸು ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್ ಕರೆ ಸಿಎಂ ಯಡಿಯೂರಪ್ಪ ಹಾಗೂ ಕ್ಯಾಬಿನೆಟ್ ಟೀಂನಲ್ಲಿ ಆತಂಕ ಮೂಡಿಸಿದೆ.
ಒಂದು ವೇಳೆ ಸಿಎಂ ಯಡಿಯೂರಪ್ಪ ಪದತ್ಯಾಗ ಮಾಡಿದರೆ, ಸಚಿವ ಸಂಪುಟ ವಿಸರ್ಜನೆಯಾಗಲಿದೆ. ಅಲ್ಲಿಗೆ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ತೆರೆ ಬೀಳಲಿದ್ದು, ಹೊಸ ನಾಯಕತ್ವದಡಿ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಯಡಿಯೂರಪ್ಪ ಆಡಳಿತದ 2ನೇ ವಾರ್ಷಿಕೋತ್ಸವದ ದಿನದಂದೇ ಪ್ರಸ್ತುತ ಸರ್ಕಾರದ ಅವಧಿ ಮುಗಿಯಲಿದೆಯಾ? ಎಂಬ ಆತಂಕ ಬಹುತೇಕ ಎಲ್ಲಾ ಸಚಿವರಲ್ಲಿ ಆತಂಕ, ಗೊಂದಲ ಮನೆ ಮಾಡಿದೆ.
ಸಂಪುಟ ಸಚಿವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ:
ಬಿಎಸ್ವೈ ಸಂಪುಟ ಸಚಿವರಿಗೂ ಅಧಿಕಾರ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಸಿಎಂ ಯಡಿಯೂರಪ್ಪ ಹೈಕಮಾಂಡ್ ಸಂದೇಶದಂತೆ ಪದತ್ಯಾಗ ಮಾಡಿದರೆ, ಸಚಿವ ಸಂಪುಟ ವಿಸರ್ಜನೆಯಾಗಲಿದೆ. ಆ ಮೂಲಕ ಸಚಿವರು ತಮ್ಮ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಅನೇಕ ಸಚಿವರಲ್ಲಿ ಪಟ್ಟ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ. ಇದರ ಮಧ್ಯೆಯೇ ಸಿಎಂ ಬಿಎಸ್ವೈ ಅಂಡ್ ಕ್ಯಾಬಿನೆಟ್ ಟೀಂ ನಾಳೆ ಆಡಳಿತದ ಎರಡನೇ ವರ್ಷದ ವರ್ಷದ ವಾರ್ಷಿಕೋತ್ಸವವನ್ನು ಆಚರಣೆ ಮಾಡುವಂತಾಗಿದೆ.
ಇದನ್ನೂ ಓದಿ: ಹೈಕಮಾಂಡ್ ಸಂದೇಶಕ್ಕೆ ಕ್ಷಣಗಣನೆ.. ಸಿಎಂ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ