ಬೆಂಗಳೂರು : ಮೈಸೂರು ಗ್ಯಾಂಗ್ ರೇಪ್ ಅಪರಾಧಿಗಳನ್ನು ಆದಷ್ಟು ಬೇಗ ಹಿಡಿಯಲಿದ್ದೇವೆ. ಮುಂದೆ ಇಂತಹ ಪ್ರಕರಣ ಮರುಕಳಿಸದ ರೀತಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ ಪ್ರವಾಸಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದಿರುವ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಕ್ತಿಮೀರಿ ಪ್ರಾಮಾಣಿಕವಾಗಿ ಅಪರಾಧಿಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತವಾಗಿ ಅಪರಾಧಿಗಳು ಸಿಕ್ಕೇ ಸಿಗುತ್ತಾರೆ.
ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನುಮುಂದೆ ಈ ರೀತಿಯ ಘಟನೆ ಆಗದಂತೆ ಅವರಿಗೆ ಶಿಕ್ಷೆ ಕೊಡಲು ಯಾವುದೇ ರೀತಿಯಲ್ಲಿಯೂ ಹಿಂದೆ-ಮುಂದೆ ನೋಡಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ, ಗೃಹ ಸಚಿವರು, ಸಿಎಂ ಎಲ್ಲರೂ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇಂದು ನಾಳೆಯೊಳಗಾಗಿ ಅಪರಾಧಿಗಳನ್ನು ಹಿಡಿದೇ ಹಿಡಿಯುತ್ತೇವೆ. ಅವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಂಡು ಇನ್ನುಮುಂದೆ ಈ ರೀತಿ ಆಗದಂತೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಮೈಸೂರು ಘಟನೆ ನಿದರ್ಶನ ಕೊಟ್ಟು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ತವರು ಜಿಲ್ಲೆ ಪ್ರವಾಸ : ಬಹಳ ದಿನಗಳ ಬಳಿಕ ಶಿವಮೊಗ್ಗ, ಶಿಕಾರಿಪುರಕ್ಕೆ ಹೋಗುತ್ತಿದ್ದೇನೆ. ವಾಪಸ್ ಬಂದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಇತರ ಮುಖಂಡರ ಜೊತೆ ಚರ್ಚೆ ಮಾಡಿ ರಾಜ್ಯ ಪ್ರವಾಸದ ದಿನಾಂಕ ನಿಗದಿ ಮಾಡುತ್ತೇವೆ. ಗಣೇಶ ಹಬ್ಬದ ಬಳಿಕ ಎಲ್ಲರೂ ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ.
ನಾನೊಬ್ಬನೇ ರಾಜ್ಯ ಪ್ರವಾಸ ಮಾಡುವ ಪ್ರಶ್ನೆ ಇಲ್ಲ. ಎಲ್ಲರೂ ಜೊತೆಯಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ಯಾವ ಜಿಲ್ಲೆಗಳಿಗೆ ಹೋಗಬೇಕು ಎಂದು ಚರ್ಚಿಸಿಯೇ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಒಂದು ತಿಂಗಳು ನಾನಂತೂ ಹೆಚ್ಚು ಎಲ್ಲೂ ಓಡಾಟ ಮಾಡಲ್ಲ. ಗಣೇಶ ಚತುರ್ಥಿ ಮುಗಿದ ನಂತರ ಹಂತ-ಹಂತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಓದಿ: ಮೈಸೂರು ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ಪಡೆದ ಪೊಲೀಸರು: ಆತ ಹೇಳಿದ್ದಿಷ್ಟು..