ಬೆಂಗಳೂರು: ಅನರ್ಹರಿಗೆ ಟಿಕೆಟ್ ನೀಡಿದ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ ಶಮನಗೊಳಿಸುವ ಪ್ರಕ್ರಿಯೆ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಮುಂದುವರಿದಿದೆ.
ಮಹಾಲಕ್ಷ್ಮಿ ಲೇಔಟ್ ಮಾಜಿ ಶಾಸಕ ನೆಲ ನರೇಂದ್ರ ಬಾಬು ಅವರನ್ನ ನಿವಾಸಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಗೋಪಾಲಯ್ಯಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಸಚಿವ ವಿ.ಸೋಮಣ್ಣ ಜತೆಗೂಡಿ ಬಂದ ನೆಲ ನರೇದ್ರ ಬಾಬು ಅವರಿಗೆ ಅಸಮಾಧಾನ ಬದಿಗಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿ. ಅಭ್ಯರ್ಥಿ ಗೆಲುವಿಗೆ ಶ್ರಮ ವಹಸಿ ಎಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಪಕ್ಷದ ಆದೇಶದಂತೆ ನಡೆಯುತ್ತೇನೆ:
ಈ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷದ ಆದೇಶದಂತೆ ನಡೆಯುತ್ತೇನೆ ಎಂದು ನೆಲ ನರೇಂದ್ರ ಬಾಬು ತಿಳಿಸಿದ್ದಾರೆ. ಕ್ಷೇತ್ರದ ಜನರ ಹಿತ ಕಾಪಾಡುವುದು ಮುಖ್ಯವಾಗಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಕ್ಷೇತ್ರದ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಆದರೆ ಪಕ್ಷ ಮುಖ್ಯವಾಗಿದ್ದು, ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಎಲ್ಲವೂ ಸುಖಾಂತ್ಯ ಕಂಡಿದೆ. ಚುನಾವಣೆ ಪ್ರಚಾರದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಹರೀಶ್, ನಾಗರಾಜ್ ಎಲ್ಲರೂ ಒಟ್ಟಾಗಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ನಮ್ಮಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಅವರು 17 ಜನ ತ್ಯಾಗ ಮಾಡಿಲ್ಲ ಅಂದರೆ ನಮ್ಮ ಸರ್ಕಾರ ಬರುತ್ತಿರಲಿಲ್ಲ. ನಮ್ಮ ಕಾರ್ಯಕರ್ತರು ಬುದ್ಧಿವಂತರಿದ್ದಾರೆ ಎಂದು ಹೇಳಿದರು.