ಬೆಂಗಳೂರು: ಹೃದಯ ಸಂಬಂಧ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಯೋಗಕ್ಷೇಮವನ್ನು ಬಿಜೆಪಿ ಹಿರಿಯ ನಾಯಕ ಹಾಗು ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿಚಾರಿಸಿದ್ದಾರೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೊಮ್ಮಾಯಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಂಗಳವಾರ ಸಂಸದ ಶಿವಕುಮಾರ್ ಉದಾಸಿ ಜತೆಯಲ್ಲಿ ಭೇಟಿ ನೀಡಿದ ಯಡಿಯೂರಪ್ಪ, ಬೊಮ್ಮಾಯಿ ಆರೋಗ್ಯ ವಿಚಾರಿಸಿ ಕೆಲ ಸಮಯ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು. ಬೊಮ್ಮಾಯಿ ಭೇಟಿ ವೇಳೆ ರಾಜಕೀಯ ಮಾತುಕತೆ ನಡೆದಿಲ್ಲ ಎನ್ನಲಾಗಿದ್ದರೂ ರಾಜ್ಯಾಧ್ಯಕ್ಷ ಸ್ಥಾನದ ವಿಚಾರದ ಕುರಿತು ಪ್ರಸ್ತಾಪವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶೋಭಾ ಕರಂದ್ಲಾಜೆ ಹೆಸರು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಚರ್ಚಿಸಿರಬಹುದು ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ತೆರಳಿ ಬೊಮ್ಮಾಯಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಸಿದ್ದರಾಮಯ್ಯ ಜತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಕೂಡ ಜತೆಗಿದ್ದರು.
ಬೊಮ್ಮಾಯಿ ಆರೋಗ್ಯ ವಿಚಾರಿಸಿದ್ದ ಪ್ರಧಾನಿ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಬೊಮ್ಮಾಯಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆದ ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಸ್ವತಃ ದೂರವಾಣಿ ಮೂಲಕ ಕರೆ ಮಾಡಿ ಬೊಮ್ಮಾಯಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಕೋರಿದ್ದರು. ಆರೋಗ್ಯದ ಕಡೆ ಗಮನ ಕೊಡುವಂತೆಯೂ ಸಲಹೆ ನೀಡಿದ್ದರು.
ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ಬೊಮ್ಮಾಯಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು. ಇದೇ ವೇಳೆ ಬೊಮ್ಮಾಯಿ ಹೃದಯ ಸಂಬಂಧ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೂರವಾಣಿ ಕರೆ ಮಾಡಿ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪಿಎಂ ಮೋದಿ.. ನಾಳೆ ಆಸ್ಪತ್ರೆಯಿಂದ ಬಿಡುಗಡೆ