ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಚರ್ಚೆ ನಡೆಸದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ಮರಳುತ್ತಿದ್ದು, ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ತೋಮರ್, ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರೂ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.
ಕೇಂದ್ರದ ಸಚಿವರನ್ನು ಭೇಟಿಯಾಗಿ ಬರ, ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವ ಕುರಿತು ಚರ್ಚೆ ನಡೆಸಿದ ಸಿಎಂ, ಸಂಸದರ ಸಭೆಯನ್ನೂ ನಡೆಸಿದರು. ಆದರೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ.
ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಿಎಂ ಬಿಎಸ್ವೈ, ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದರು. 15 ಮಂದಿಯನ್ನು ಮೊದಲ ಹಂತದಲ್ಲಿ ಸಚಿವ ಸ್ಥಾನಕ್ಕೆ ತೆಗೆದುಕೊಳ್ಳಿ ಹಾಗೂ 30 ನಿಗಮ ಮಂಡಳಿಗೆ ಶಾಸಕರನ್ನ ನೇಮಿಸಿ ಎನ್ನುವ ಸಲಹೆಯನ್ನು ನಡ್ಡಾ ನೀಡಿದ್ದು, ಎರಡನೇ ಹಂತದಲ್ಲಿ ಅನರ್ಹ ಶಾಸಕರಿಗೆ ಅವಕಾಶ ನೀಡಿ ಎಂದಿದ್ದರಂತೆ.
ಇದರ ಮುಂದುವರೆದ ಚರ್ಚೆಯನ್ನು ಅಮಿತ್ ಶಾ ಜೊತೆ ಯಡಿಯೂರಪ್ಪ ನಡೆಸಬೇಕಿತ್ತು. ಆದರೆ ಇಂದು ಅಮಿತ್ ಶಾ ಅವರ ಭೇಟಿ ಸಾಧ್ಯವಾಗದ ಕಾರಣ ಯಡಿಯೂರಪ್ಪ ಶಾ ಸೂಚನೆ ಮೇರೆಗೆ ಬೆಂಗಳೂರಿಗೆ ಬರುತ್ತಿದ್ದಾರೆ.
ಸಚಿವರ ಪಟ್ಟಿ ಹಿಡಿದು ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಇದೀಗ ಬರಿಗೈಲಿ ವಾಪಸಾಗುತ್ತಿದ್ದಾರೆ. ಮಧ್ಯಾಹ್ನ 1.30ರ ವಿಮಾನದಲ್ಲಿ ಹೊರಟಿದ್ದು ಸಂಜೆ 4.15ಕ್ಕೆ ಬೆಂಗಳೂರು ತಲುಪಲಿದ್ದಾರೆ. ಎರಡು ದಿನದ ನಂತರ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಬೆಂಗಳೂರಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಸಿಎಂ, ಅಮಿತ್ ಶಾ ದೂರವಾಣಿ ಕರೆ ಮಾಡಿದ್ದರು. ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಎಂದಿದ್ದಾರೆ. ಎರಡು ದಿವಸ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ಮಾಡಲಿದ್ದೇನೆ. ಬಳಿಕ ಮತ್ತೆ ದೆಹಲಿಗೆ ಆಗಮಿಸಲು ಹೇಳಿದ್ದಾರೆ ಎಂದರು.