ಬೆಂಗಳೂರು: ಪ್ರೀತಿಗೆ ವಿರೋಧಿಸಿ ತಂಗಿಯನ್ನು ಚಾಕುವಿನಿಂದ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿದ್ದ ಅಣ್ಣನನ್ನು ಬೈಯ್ಯಪ್ಪನ ರೈಲ್ವೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜು ಬಂಧಿತ ಆರೋಪಿ. ಈತನ ತಂಗಿ ಮಂಗಳಾ ರವಿ ಕೊಲೆಯಾದ ಯುವತಿ. ಮೃತ ಮಂಗಳ ಹೆಣ್ಣೂರಿನಲ್ಲಿ ತಾಯಿ ಹಾಗೂ ಅಣ್ಣ ರಾಜು ಜೊತೆ ವಾಸವಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ರಾಜು ಆಟೋ ಚಾಲಕನಾಗಿದ್ದ. ಮಂಗಳಾ ಯುವಕನೊಬ್ಬನ ಪ್ರೀತಿ ಬಲೆಗೆ ಬಿದ್ದಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಆಕೆಗೆ ಬೈದು ಬುದ್ಧಿ ಹೇಳಿದ್ದರು. ಹೀಗಿದ್ದರೂ ಭಾನುವಾರ ಪ್ರಿಯಕರನೊಂದಿಗೆ ಸುತ್ತಾಡಿ ಸಂಜೆ ಮನೆಗೆ ಬಂದಿದ್ದಳು. ಈ ಬಗ್ಗೆ ಸಹೋದರ ರಾಜು ಪ್ರಶ್ನಿಸಿದ್ದ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೇರಿ ಮನೆಯಲ್ಲಿದ್ದ ಚಾಕುವಿನಿಂದ ತಂಗಿಯ ಹೊಟ್ಟೆ ಇರಿದು ರಾಜು ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ರೈಲ್ವೆ ಹಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಆಧರಿಸಿ ಕೊಲೆ ರಹಸ್ಯ ಬಹಿರಂಗ:
ತಂಗಿಯನ್ನು ಸಾಯಿಸಿದ್ದ ಸಹೋದರ ಮೃತದೇಹ ಸಾಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹತ್ಯೆ ಬಳಿಕ ಮೃತದೇಹವನ್ನು ಆಟೋದಲ್ಲಿ ಸಾಗಿಸಿ ಬೈಯ್ಯಪ್ಪನ ಹಳ್ಳಿ ರೈಲ್ವೆ ಹಳಿ ಬಿಸಾಡಿ ವಾಪಸ್ ಆಗಿದ್ದ. ಇತ್ತ ರೈಲ್ವೆ ಹಳಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವದ ಮೇಲೆ ಗಾಯದ ಗುರುತುಗಳನ್ನು ಕಂಡು ಕೊಲೆಯಾಗಿರಬಹುದು ಎಂದು ಶಂಕಿಸಿದ್ದರು. ಬಳಿಕ ಸಮೀಪದ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ತಲಾಶ್ ನಡೆಸಿದಾಗ ಯುವತಿ ಓಡಾಡಿರುವುದು ಕಂಡುಬಂದಿರಲಿಲ್ಲ. ಆದರೆ ಆಟೋ ಹೋಗಿರುವುದು ಪತ್ತೆಯಾಗಿತ್ತು. ಆಟೋ ನಂಬರ್ ಆಧರಿಸಿ ರಾಜುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.