ಬೆಂಗಳೂರು/ದೇವನಹಳ್ಳಿ : ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳ ಚತುರ ಆಡಳಿತಗಾರರಾಗಿದ್ದರು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
511ನೇ ಕೆಂಪೇಗೌಡ ಜಯಂತಿ ಅಂಗವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದ ಸೆಂಟ್ರಲ್ ಪಾರ್ಕ್ನಲ್ಲಿ 108 ಅಡಿ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಕಾಮಾಗಾರಿಯ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣವಾಗಲಿದೆ. 78 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು ಅವರ ಜೀವನ ಸಾಧನೆಯ ಬಗ್ಗೆ ಬೆಳಕು ಚೆಲ್ಲುವ ಸೆಂಟ್ರಲ್ ಪಾರ್ಕ್ ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಲಿದೆ. ಒಂದು ವರ್ಷದೊಳಗೆ ಕಾಮಗಾರಿ ಸಂಪೂರ್ಣ ಮುಗಿಸುವುದಾಗಿ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆಯ ಕಾಮಗಾರಿಗೆ ನಾವೆಲ್ಲ ಒಟ್ಟಾಗಿ ಸೇರಿ ಸಂತೋಷದಿಂದ ಚಾಲನೆ ನೀಡಿದ್ದೇವೆ. ರಾಜ್ಯ ರಾಜಧಾನಿಯ ನಿರ್ಮಾತೃ ಕೆಂಪೇಗೌಡರಿಗೆ ಈ ಕಾರ್ಯಕ್ರಮದ ಮೂಲಕ ಗೌರವ ಕೊಡುತ್ತಿದ್ದೇವೆ. ನಗರವನ್ನು ಯೋಜನಾ ಬದ್ಧವಾಗಿ ಬೆಳೆಸುವಲ್ಲಿ ಕೆಂಪೇಗೌಡರ ಪಾತ್ರ ದೊಡ್ಡದು, ಶಾಶ್ವತ ನದಿಮೂಲಗಳಿಲ್ಲದ ಈ ಪ್ರದೇಶದಲ್ಲಿ ನೂರಾರು ಕೆರೆ ಕಟ್ಟಿಸಿ ಜನೋಪಯೋಗಿ ಕೆಲಸ ಮಾಡಿದರು. ನಗರವನ್ನ ಅತ್ಯಂತ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದರಿಂದ ಚಿಕ್ಕಪೇಟೆ, ಅಕ್ಕಿಪೇಟೆ, ಬಳೆಪೇಟೆ, ಕುಂಬಾರಪೇಟೆ ಈಗಲೂ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ ಎಂದರು.