ಬೆಂಗಳೂರು : ಸಿಗರೇಟ್ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದಡಿ ಎಸಿಪಿ ಪ್ರಭು ಶಂಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಪ್ರತ್ಯೇಕ ಮೂರು ಎಫ್‌ಐಆರ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ಮುಂದಿನ ಕಲಾಪದವರೆಗೂ ವಿಸ್ತರಿಸಿರುವ ಹೈಕೋರ್ಟ್ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.
ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭು ಶಂಕರ್ ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ. ಅಲ್ಲದೆ ಎಫ್‌ಐಆರ್‌ಗಳಿಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿದೆ.
ಕೇಂದ್ರ ಅಪರಾಧ ವಿಭಾಗದ ಎಪಿಸಿ ಪ್ರಭು ಶಂಕರ್, ಲಾಕ್‌ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ನೆರವು ನೀಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ 63 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೇ 7ರಂದು ಎರಡು ಪ್ರತ್ಯೇಕ ಎಫ್‌ಐಆರ್ ಮತ್ತು ಎಸಿಬಿ ಪೊಲೀಸರು ಮೇ 21ರಂದು ಪ್ರತ್ಯೇಕ 3 ಎಫ್‌ಐಆರ್ ದಾಖಲಿಸಿದ್ದಾರೆ.
ಈ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕೋರಿ ಪ್ರಭುಶಂಕರ್ ಹೈಕೋರ್ಟ್‌ಗೆ ಪ್ರತ್ಯೇಕ ಐದು ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸದ್ಯ ಪ್ರಭುಶಂಕರ್ ಭವಿಷ್ಯ ಮುಂದಿನ ವಿಚಾರಣೆಯಲ್ಲಿ ನಿರ್ಧಾರವಾಗಲಿದೆ.