ಬೆಂಗಳೂರು: ಯಾವುದೇ ಕಾರಣಕ್ಕೂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೊಡಮಾಡುವ ಸಹಾಯಧನದಲ್ಲಿ ಕಡಿತ ಮಾಡಬಾರದು. ಬಜೆಟ್ನಲ್ಲಿ ರೈತರ ಪರವಾಗಿ ತೃಪ್ತಿದಾಯಕ ಕಾರ್ಯಕ್ರಮ ರೂಪಿಸಿಲ್ಲ. ಬಜೆಟ್ ಕೇವಲ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೇ ಸೀಮಿತವಾಗಿದೆ. ರೈತ ಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ರವಾರ ನೂತನ ಕಾಂಗ್ರೆಸ್ ಸರ್ಕಾರದ ಹೊಸ ಬಜೆಟ್ ಮಂಡಿಸಿದರು. ಪಂಚ ಗ್ಯಾರಂಟಿ ಕೇಂದ್ರೀಕೃತ ಗ್ಯಾರಂಟಿ ಬಜೆಟ್ ಇದಾಗಿದೆ. ಪಂಚ ಗ್ಯಾರಂಟಿಗಳಿಂದ ಆದಾಯ ಕೊರತೆಯ ಬಜೆಟ್ ಮಂಡಿಸಿರುವ ಸಿಎಂ, ಗ್ಯಾರಂಟಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಪಾಲಿನ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ.
3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಆರ್ಥಿಕ ವರ್ಷದ ಉಳಿದಿರುವ ಅವಧಿಗೆ ಅಂದಾಜು 85,000 ಕೋಟಿ ಸಾಲ ಮಾಡಲು ಮುಂದಾಗಿದ್ದಾರೆ. ಈ ವರ್ಷ ಉಳಿದ ಅವಧಿಗೆ ಪಂಚ ಗ್ಯಾರಂಟಿಗಳಿಗೆ ಬೇಕಾಗಿರುವ 34,410 ಕೋಟಿ ರೂ. ಹಣವನ್ನು ಬಜೆಟ್ನಲ್ಲಿ ಹೊಂದಿಸಲು ಕಸರತ್ತು ನಡೆಸಿದ್ದಾರೆ.
ಪಂಚ ಗ್ಯಾರಂಟಿಗಳ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಅನುದಾನ ನೀಡಲು ಕೆಲ ಇಲಾಖೆಗಳಿಗೆ ಅನುದಾನ ಕಡಿತ ಮಾಡಿರುವ ಸಿಎಂ ಸಿಧದರಾಮಯ್ಯ, ಬಿಜೆಪಿ ಸರ್ಕಾರದ ಕೆಲ ಯೋಜನೆಗಳಿಗೂ ಕೊಕ್ ನೀಡಿದ್ದಾರೆ. ತಮ್ಮ ಬಜೆಟ್ನಲ್ಲಿ ಕೆಲ ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಸುಮಾರು 7,000 ಕೋಟಿ ರೂ. ಹೊಂದಿಸಿದ್ದಾರೆ. ಆ ಮೂಲಕ ಕೆಲ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಈ ನಿಟ್ಟಿನಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಯತ್ನಿಸಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಗೆ ಕತ್ತರಿ: ಪಂಚ ಗ್ಯಾರಂಟಿಗಳಿಗಾಗಿ ಸಿಎಂ ಸಿದ್ದರಾಮಯ್ಯ ಕಿಸಾನ್ ಸಮ್ಮಾನ್ ಯೋಜನೆಗೆ ಕತ್ತರಿ ಹಾಕಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ 6,000 ರೂ.ಗೆ ರಾಜ್ಯ ತನ್ನ ಪಾಲಿನಿಂದ ಹೆಚ್ಚುವರಿ ವಾರ್ಷಿಕ 4,000 ರೂ. ಸಹಾಯಧನ ನೀಡುತ್ತಾ ಬರುತ್ತಿದೆ. ಆ ಮೂಲಕ ರಾಜ್ಯದ ರೈತರಿಗೆ ವಾರ್ಷಿಕ ಒಟ್ಟು 10,000 ರೂ. ಹಣ ಜಮೆ ಮಾಡಲಾಗುತ್ತಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಪಾಲಿನಿಂದ ಹೆಚ್ಚುವರಿ 4,000 ರೂ. ಸಹಾಯಧನ ನೀಡಲು ನಿರ್ಧರಿಸಿದ್ದರು. ಅದರಂತೆ ವರ್ಷದಲ್ಲಿ ಎರಡು ಕಂತಿನಲ್ಲಿ ರೈತರ ಖಾತೆಗೆ ತಲಾ 2,000 ರೂ. ನಂತೆ ಸಹಾಯ ಧನ ನೀಡಲಾಗುತ್ತಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ರಾಜ್ಯದ ಪಾಲಿನ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ. ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ಗೆ ಯಾವುದೇ ಅನುದಾನ ಇಟ್ಟಿಲ್ಲ. ಆ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಪಾಲಿನ 4,000 ರೂ. ರೈತರಿಗೆ ಸಿಗುವುದು ಅನುಮಾನವಾಗಿದೆ.
ಪಂಚ ಗ್ಯಾರಂಟಿಗಾಗಿ ಸಿಎಂ ಸಿದ್ದರಾಮಯ್ಯ ಕಿಸಾನ್ ಸಮ್ಮಾನ್ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ. ಪ್ರತಿ ವರ್ಷ ರಾಜ್ಯದ ಸುಮಾರು 45 ಲಕ್ಷ ದಿಂದ 50 ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ರಾಜ್ಯ ಸರ್ಕಾರ ತನ್ನ ಪಾಲಿನಲ್ಲಿ ವಾರ್ಷಿಕ ಅಂದಾಜು 1,000 ಕೋಟಿ ರೂ. ಅನುದಾನ ನೀಡುತ್ತಿತ್ತು. ನಿನ್ನೆ ಮಂಡಿಸಿದ ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಯಾವುದೇ ಅನುದಾನ ಕೊಟ್ಟಿಲ್ಲ.
ರಾಜ್ಯದ ಕಿಸಾನ್ ಸಮ್ಮಾನ್ ಅನುದಾನ ಏನು?: ರಾಜ್ಯ ಸರ್ಕಾರ 2019ರಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಹೆಚ್ಚುವರಿ ಪಾಲನ್ನು ನೀಡುತ್ತಿದೆ. ಕೃಷಿ ಇಲಾಖೆ ನೀಡಿದ ಅಂಕಿ - ಅಂಶದಂತೆ 2019-20ರಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ 905.75 ಕೋಟಿ ರೂ. ಪಾವತಿ ಮಾಡಿತ್ತು. 2020-21 ಸಾಲಿನಲ್ಲಿ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 983.79 ಕೋಟಿ ರೂ. ಹಣ ಪಾವತಿ ಮಾಡಿತ್ತು.
ಇನ್ನು 2021-22 ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ 1,975.12 ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಿತ್ತು. 2022-23ರಲ್ಲಿ ಒಟ್ಟು 956.73 ಕೋಟಿ ರೂ. ರೈತರಿಗೆ ಪಾವತಿ ಮಾಡಿತ್ತು. ಹಿಂದಿನ ರಾಜ್ಯ ಸರ್ಕಾರ ಪ್ರತಿ ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಸುಮಾರು 800- 1,000 ಕೋಟಿ ರೂ. ಅನುದಾನವನ್ನು ಮೀಸಲಿಡುತ್ತಿತ್ತು. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಕಿಸಾನ್ ಸಮ್ಮಾನ್ ಯೋಜನೆಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ.
ಅನುದಾನ ಕಡಿತಕ್ಕೆ ರೈತರ ಅಸಮಾಧಾನ: 'ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ಯಾವುದೇ ಅನುದಾನ ಮೀಸಲಿಡದೇ ಇರುವುದು ರಾಜ್ಯದ ರೈತರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಬರದ ಛಾಯೆ, ಗೊಬ್ಬರ, ಬಿತ್ತನೆ ಬೀಜದ ಬೆಲೆ ಏರಿಕೆಯಾಗಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಕಡಿತವಾದರೆ ರೈತ ಸಂಕಷ್ಟಕ್ಕೆ ಸಿಲುಕಲಿದ್ದಾನೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್' ಆತಂಕ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೊಡಮಾಡುವ ಸಹಾಯಧನದಲ್ಲಿ ಕಡಿತ ಮಾಡಬಾರದು. ಬಜೆಟ್ನಲ್ಲಿ ರೈತರ ಪರವಾಗಿ ತೃಪ್ತಿದಾಯಕ ಕಾರ್ಯಕ್ರಮ ರೂಪಿಸಿಲ್ಲ. ಬಜೆಟ್ ಕೇವಲ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೇ ಸೀಮಿತವಾಗಿದೆ. ರೈತ ಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Budget: ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ 34 ಸಾವಿರ ಕೋಟಿ ರೂ. ಸಿಎಂ ಸಿದ್ದರಾಮಯ್ಯ ಘೋಷಣೆ