ಬೆಂಗಳೂರು: ರಾಜ್ಯದಲ್ಲಿ ಸಂಚಲನ ಉಂಟು ಮಾಡಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಬಹುತೇಕ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿವೆ.
ಕಳೆದ ಫೆ. 13ರಂದು ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡರಿಗೆ, ಇಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆಫರ್ ಕೊಟ್ಟಿದ್ದರು ಎನ್ನಲಾಗಿದ್ದ ಪ್ರಕರಣ ಆಡಿಯೋದಲ್ಲಿ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಹೆಸರು ಉಲ್ಲೇಖವಾಗಿತ್ತು. ಹಾಗಾಗಿ, ಈ ವಿಷಯ ಸದನದಲ್ಲೂ ಪ್ರತಿಧ್ವನಿಸಿತ್ತು.
ಆಡಿಯೋ ಬಗ್ಗೆಯೇ ಮೂರ್ನಾಲ್ಕು ದಿನ ಸದನದಲ್ಲಿ ಚರ್ಚೆ ನಡೆದಿತ್ತು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ್ ಸೇರಿ 4 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಶೀಘ್ರ ತನಿಖೆ ನಡೆಸಲು ಆಗಿನ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಸೂಚಿಸಿದ್ದರು . ತಕ್ಷಣ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ತನಿಖೆಗೆ ಆದೇಶ ನೀಡಿದ್ದರು.
ಆದರೆ, ಈಗ ಕುಮಾರಸ್ವಾಮಿ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಇಬ್ಬರೂ ಅಧಿಕಾರದಲಿಲ್ಲ. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಈ ಪ್ರಕರಣದ ತನಿಖೆಗೆ ಬ್ರೇಕ್ ಬೀಳುವುದು ಬಹುತೇಕ ನಿಶ್ಚಿತ ಎಂಬ ಮಾತುಗಳು ವಿರೋಧ ಪಕ್ಷದ ನಾಯಕರಿಂದ ಕೇಳಿ ಬರುತ್ತಿವೆ.