ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರದಲ್ಲಿ ಕಾರ್ಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸುವ ಕುರಿತಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ ಎಚ್.ಮುನಿಯಪ್ಪ ಅವರು ಮಾಹಿತಿ ನೀಡಿದರು. ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆ ನಡೆಸಲಿದ್ದು, ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು ಎಂದು ತಿಳಿಸಿದರು.
ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಯೋಜನೆಗಾಗಿ ಕಾರ್ಡ್ ಬಯಸುವವರಿಗೆ ಬಿಪಿಎಲ್ಎಬಿ ಎಂದು ನಮೂದಿಸಿ ಕಾರ್ಡ್ ನೀಡುವ ಚಿಂತನೆ ಇದೆ. ಇಂತಹವರಿಗೆ ಪಡಿತರ ಯೋಜನೆ ಲಾಭ ಇರುವುದಿಲ್ಲ. ಆದರೆ, ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಬಿಪಿಎಲ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಆರೋಗ್ಯ ಯೋಜನೆಗಾಗಿಯೇ ಬಿಪಿಎಲ್ ಕಾರ್ಡ್ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು.
ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಪಡಿತರದಾರರಿದ್ದು, ಅವರಲ್ಲಿ 97 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ 30 ಲಕ್ಷ ಬಿಪಿಎಲ್ ಪಡಿತರದಾರರ ದತ್ತಾಂಶ ಮಾಹಿತಿಗಳು ಸರಿಯಿಲ್ಲ. ಅವೆಲ್ಲವನ್ನೂ ಸರಿಪಡಿಸಿ ಇವರಿಗೂ ಸಹ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಯೋಜನೆಯ ಲಾಭ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
97 ಲಕ್ಷ ಬಿಪಿಎಲ್ ಕಾರ್ಡುದಾರರಿಗೆ 566 ಕೋಟಿ ರೂ.ಗಳನ್ನು ಅನ್ನಭಾಗ್ಯ ಯೋಜನೆಯಡಿ ವರ್ಗಾವಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಗೆ ರಾಜ್ಯಸರ್ಕಾರ ಪ್ರಯತ್ನ ನಡೆಸಿದೆ. ಅಕ್ಕಿ ಖರೀದಿಗೆ ಟೆಂಡರ್ ಕರೆಯುವ ಬಗ್ಗೆಯೂ ಚಿಂತನೆ ಇದೆ. ಆದಷ್ಟು ಬೇಗ ಅಕ್ಕಿ ಖರೀದಿಸಿ ಅಕ್ಕಿಯನ್ನು ವಿತರಿಸಲು ಕ್ರಮಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಟೆಂಡರ್ ಮಾಡಿ ಅಕ್ಕಿ ಸರಬರಾಜು ಮಾಡಲು ಆದಷ್ಟು ಬೇಗ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗುವುದು. ಅಕ್ಕಿ ದರ, ಯಾವ ರೀತಿಯಲ್ಲಿ ಪೂರೈಕೆ ಮಾಡುತ್ತಾರೆ ಎಂಬ ವಿಚಾರಗಳ ಕುರಿತು ಏಜೆನ್ಸಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಈ ಸಂಸ್ಥೆಗಳು ಅಕ್ಕಿ ಸರಬರಾಜು ಮಾಡಿದ ನಂತರ ರಾಜ್ಯದ ಜನರಿಗೆ ಹತ್ತು ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ. ಆ ನಂತರ ಅಕ್ಕಿ ಪೂರೈಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎಷ್ಟೇ ಕಷ್ಟವಾದರೂ ಈಗಾಗಲೇ ನೀಡಿರುವ ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ವಿತರಿಸುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇದನ್ನೂಓದಿ: ನಾಳೆ ಶಾಸಕಾಂಗ ಪಕ್ಷದ ಸಭೆ.. ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಶಾಸಕರಿಂದ ಪ್ರಶ್ನೆಗಳ ಸುರಿಮಳೆ ಸಾಧ್ಯತೆ!