ಬೆಂಗಳೂರು: ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರ ವಾರ್ಡ್ನ ರಾಮಮೂರ್ತಿನಗರ, ಯರ್ರಯ್ಯನಪಾಳ್ಯ, ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ಬಡಾವಣೆಗಳ 6 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಚಿವ ಬಿ.ಎ.ಬಸವರಾಜ ನೇತೃತ್ವದಲ್ಲಿ ಆಹಾರ ಕಿಟ್ ಹಾಗೂ ತರಕಾರಿಗಳನ್ನು ಸಮಾಜ ಸೇವಕ ಬಾಕ್ಸರ್ ನಾಗರಾಜ್ ವಿತರಿಸಿದರು.
ನಂತರ ಮಾತನಾಡಿದ ಸಚಿವ ಬಿ.ಎ.ಬಸವರಾಜ್, ಇಂದು 6 ಸಾವಿರ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ತರಕಾರಿಗಳನ್ನು ವಿತರಿಸಿರುವುದು ಸ್ವಾಗತಾರ್ಹ. ಪ್ರತಿದಿನ ಕ್ಷೇತ್ರದ ಮುಖಂಡರು ಬಡವರನ್ನು ಗುರುತಿಸಿ ಆಹಾರ ಸಾಮಗ್ರಿಗಳನ್ನು ತಲುಪಿಸುತ್ತಿರುವುದು ಸಂತಸ ತಂದಿದೆ ಎಂದರು.
ಮೈಸೂರಿನ ಮೃಗಾಲಯಕ್ಕೆ ಕ್ಷೇತ್ರದ ಎಲ್ಲಾ ಮುಖಂಡರಿಂದ ಸುಮಾರು 84 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಲಾಗಿದೆ. ದಾವಣಗೆರೆಯ ಜಿಲ್ಲೆಯಲ್ಲಿ ವೈರಾಣು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಿನ್ನೆ ಹಲವು ಅಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿ ಸೋಂಕು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಮಾಜ ಸೇವಕ ಬಾಕ್ಸರ್ ನಾಗರಾಜ್ ಮಾತನಾಡಿ, ಲಾಕ್ಡೌನ್ ವೇಳೆ ಬಡವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಬಿ.ಎ.ಬಸವರಾಜರವರ ನಿರ್ದೇಶನದಂತೆ 6 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ ರೈತರಿಂದ ನೇರವಾಗಿ ಖರೀದಿಸಿದ ತರಕಾರಿಗಳನ್ನು ವಿತರಿಸಲಾಗಿದೆ. ಮುಂದೆಯೂ ಬಡಜನರನ್ನು ಗುರುತಿಸಿ ವಿತರಿಸಲಾಗುವುದೆಂದು ತಿಳಿಸಿದರು.