ಬೆಂಗಳೂರು: ಸರ್ವಪಕ್ಷ ಸಭೆ ಯಾವಾಗ ಕರೆಯಬೇಕೆನ್ನುವುದು ಆಡಳಿತ ಪಕ್ಷಕ್ಕೆ ಗೊತ್ತಿರುತ್ತದೆ. ಗಡಿ ಸಮಸ್ಯೆ ಬಗ್ಗೆ ಸರ್ವಪಕ್ಷ ಸಭೆ ಕರೆಯುವ ಸ್ಥಿತಿ ಇನ್ನೂ ಬಂದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಯಸಿದ ರೀತಿ ರಾಜಕಾರಣ ಮಾಡಲು ಆಗಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಸರ್ವಪಕ್ಷ ಸಭೆ ಅಗತ್ಯವಿಲ್ಲ: ಆರ್.ಟಿ ನಗರದ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ್ದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸಿದ್ದರಾಮಯ್ಯ ಏನು ಬಯಸ್ತಾರೋ ಆ ರೀತಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಗಡಿ ಸಮಸ್ಯೆ ಕುರಿತಾಗಿ ಯಾವಾಗ ಸಭೆ ಕರೆಯಬೇಕು ಅನ್ನೋದು ಆಡಳಿತ ಪಕ್ಷಕ್ಕೆ ಗೊತ್ತಿದೆ. ಸರ್ವಪಕ್ಷ ಸಭೆ ಕರೆಯುವಂತ ಸಂದರ್ಭವೂ ಈಗ ಬಂದಿಲ್ಲ. ಅವಶ್ಯಕತೆಯೂ ಇಲ್ಲ. ಅವರು ನಾಟಕ ಸೂತ್ರಧಾರರಾಗಿದ್ದರೆ ನಾವು ಪಾತ್ರಧಾರಿಗಳಾಗಬೇಕಿಲ್ಲ. ಆಂಥ ಸಂದರ್ಭ ಬಂದಾಗ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತೇವೆ ಎಂದರು.
ಮಹಾಜನ್ ವರದಿ ಅಂತಿಮ: ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಗಡಿ ಪ್ರದೇಶದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಪ್ರೀತಿಯಿಂದ ಬದುಕುತ್ತಿದ್ದಾರೆ. ಕೆಲ ಕಡಿಕಗೇಡಿಗಳು ಪದೆ ಪದೇ ಗಡಿ ವಿಚಾರದ ಕ್ಯಾತೆ ತೆಗೆದು ರಾಜಕೀಯ ಮಾಡುತ್ತಿದ್ದಾರೆ. ಮಹಾಜನ್ ವರದಿ ಅಂತಿಮವಾಗಿದ್ದು, ಅದನ್ನು ಬಿಟ್ಟು ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸಚಿವರು ಬಂದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ: ಕರ್ನಾಟಕದ ಒಂದು ಇಂಚು ನೆಲ ಮಹಾರಾಷ್ಟ್ರಕ್ಕೆ ಕೊಡುವ ಪ್ರಶ್ನೆಯೇ ಇಲ್ಲ, ಮೊನ್ನೆ ಸೂಕ್ಷ್ಮವಾಗಿ ಮಹಾರಾಷ್ಟ್ರ ಸಚಿವರಿಗೆ ಸಂದೇಶ ಕಳಿಸಿದ್ದೇವೆ. ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಸಹ ಬರೆದಿದ್ದಾರೆ. ಮಹಾ ಸಚಿವರು ಬಂದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಅಂತ ಕಠಿಣ ಭಾಷೆಯಲ್ಲಿ ಸೂಚಿಸಿದ್ದೇವೆ ಎಂದು ಮಹಾರಾಷ್ಟ್ರ ಸಚಿವರಿಗೆ ಖಡಕ್ ಸಂದೇಶ ರವಾನಿಸಿದರು.
ಇದನ್ನೂಓದಿ:ಬೆಳಗಾವಿಯಲ್ಲಿ ಮಹಾರಾಷ್ಟ್ರ ಬಸ್ಗಳ ಮೇಲೆ ಕಲ್ಲು ತೂರಾಟ ಆರೋಪ: ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್