ಬೆಂಗಳೂರು: 50 ವರ್ಷಗಳಿಂದ ವಾಲ್ಮಿಕಿ ಸಮುದಾಯದವರ ವೋಟ್ ಹಾಕಿಸಿಕೊಂಡರು. ಆದರೆ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮುಲು, ರಾಜುಗೌಡ, ಗೋವಿಂದ್ ಕಾರಜೋಳ ಜನರಲ್ ಕ್ಯಾಟಗಿರಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಒಂದು ಪಂಚಾಯತ್ ಮೆಂಬರ್ ಆಗಲು ಬಲಿಷ್ಠ ಸಮುದಾಯಗಳು ಬಿಡುವುದಿಲ್ಲ. 50 ವರ್ಷಗಳಿಂದ ಈ ಸಮುದಾಯದವರ ವೋಟ್ ಹಾಕಿಸಿಕೊಂಡರು. ಆದರೆ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ ಎಂದಿದ್ದಾರೆ.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಬೇಡ್ಕರ್ ಸ್ಥಾನದಲ್ಲಿ ನಿಂತು ಕೆಲಸ ಮಾಡಿದ್ದಾರೆ. ನಮ್ಮ ಸಮುದಾಯದ ಶಾಸಕರು ಹೆಚ್ಚು ಗೆದ್ದು ಬರಲು ಕಾರಣವಾಗಿದ್ದು ಏರಿಯಾ ರಿಮೋಟ್ ಕಂಟ್ರೋಲ್ ಕಾಯಿದೆ ತೆಗೆದಿದ್ದರಿಂದ. ಆ ಕೆಲಸ ಮಾಡಿದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು. ಅವರು ಮಾಡಿದ ಕೆಲಸದಿಂದ ನಮ್ಮ ಶಾಸಕರು ಹೆಚ್ಚು ಗೆದ್ದು ಬಂದರು. ನಮ್ಮ ಸಮುದಾಯಕ್ಕೆ ಅನುಕೂಲ ಸಿಗಲು ಅಂದಿನ ಸಿಎಂ ಕುಮಾರಸ್ವಾಮಿ ನಾಗಮೋಹನ್ ದಾಸ ಕಮಿಟಿ ರಚನೆ ಮಾಡಿದ್ದರು ಎಂದರು.
ಹುಟ್ಟು ಆಕಸ್ಮಿಕ, ಸಾವು ಖಚಿತ. ಈ ನಡುವೆ ನಾವು ಏನಾದರೂ ಸಾಧಿಸಬೇಕು. ಅದನ್ನು ಬೊಮ್ಮಾಯಿ ಅವರು ಕೆಲಸದ ಮೂಲಕ ತೋರಿಸಿದ್ದಾರೆ. ಈಗ ಬಸವರಾಜ ಬೊಮ್ಮಾಯಿ, ಆಧುನಿಕ ಬಸವಣ್ಣ, ಸಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್ ಇದ್ದ ಹಾಗೆ. ದೇವೇಗೌಡರು 1979ರಲ್ಲಿ ನಾಯಕ ಪದ ತೆಗೆದು ಪರಿಶಿಷ್ಟ ಪಂಗಡಕ್ಕೆ ನೀಡಿದ್ದರು. ಎಸ್ಟಿ ಫಲಾನುಭವಿ ಯಾರಾದರೂ ಲಾಭ ಪಡೆದುಕೊಂಡಿದ್ರೆ ಅದು ದೇವೇಗೌಡರಿಂದ. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿಯಂದು ರಜೆ ಘೋಷಣೆ ಮಾಡಿದ್ರು. ಪ್ರತಿಮೆ ನಿರ್ಮಾಣಕ್ಕೆ ಎರಡು ಎಕರೆ ಜಾಗ ನಿಗದಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ರಾಜೂ ಗೌಡ, ಶ್ರೀರಾಮನ ರೂಪದಲ್ಲಿ ಸಿಎಂ ಬೊಮ್ಮಾಯಿ ಬಂದು ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಜೀವ ಇರುವ ತನಕ ನಿಮ್ಮ, ಸರ್ಕಾರದ ಗುಲಾಮನಾಗಿ ಇರುತ್ತೇವೆ. ನೀವು ಏನು ಮಾಡಲು ಹೇಳುತ್ತೀರಾ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸೈನಿಕರು ಯಾವ ರಾಜನ ಹಿಂದೆ ನಿಲ್ಲುತ್ತಾರೆಯೋ ಅವರು ಸೋಲುವುದೇ ಇಲ್ಲ. ನಾವೆಲ್ಲ ಸೈನಿಕರು ನಿಮ್ಮ ಹಿಂದೆ ನಿಲ್ಲುತ್ತೇವೆ. ಇದು ಮರೆಯಲಾರದ ಕ್ಷಣವಾಗಿದೆ. ನಿಮಗೆಲ್ಲಾ ನಾನು ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ ಎಂದು ವೇದಿಕೆಯಲ್ಲೇ ರಾಜೂ ಗೌಡ ದೀರ್ಘ ದಂಡ ನಮಸ್ಕಾರ ಹಾಕಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ತೆಗೆದುಕೊಳ್ಳುವ ನನ್ನ ಎಲ್ಲಾ ತೀರ್ಮಾನ ಸಮಾಜದ ಏಳಿಗೆಗಾಗಿ ಇರಲಿದೆ: ಸಿಎಂ