ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ 6 ಖಾಸಗಿ ಶಾಲೆಗಳಲ್ಲಿ ಏಕಕಾಲದಲ್ಲಿ ಇ-ಮೇಲ್ ಮುಖಾಂತರ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತ್ತು. ಈ ಮಾಹಿತಿ ಬೆನ್ನಲ್ಲೇ ಸ್ಥಳೀಯ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಇಂಚಿಂಚೂ ಸ್ಥಳ ಪರಿಶೀಲಿಸಿದರು. ಎಲ್ಲಿಯೂ ಕೂಡ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ.
ಬಾಂಬ್ ಇಟ್ಟಿರುವ ಬಗ್ಗೆ ಆಯಾ ಶಾಲಾ ಆಡಳಿತ ಮಂಡಳಿ ಕರೆ ಮಾಡಿದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗಳತ್ತ ಗಾಬರಿಗೊಂಡು ಧಾವಿಸಿದ್ದರು. ಮಕ್ಕಳನ್ನು ತುರ್ತಾಗಿ ಕರೆದುಕೊಂಡು ಹೋಗುವಂತೆ ಹೇಳಿದ ಹಿನ್ನೆಲೆಯಲ್ಲಿ ಕೂಡಲೇ ಶಾಲೆಗಳಿಗೆ ದೌಡಾಯಿಸಿ ಮಕ್ಕಳನ್ನು ಕರೆದುಕೊಂಡರು. ಶಾಲೆಗೆ ಸೈಕಲ್‌ನಲ್ಲಿ ಬಂದಿದ್ದ ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಹೋಗುವಂತೆ ಸೂಚಿಸಲಾಗಿತ್ತು.
1. ಇಮೇಲ್‌ನಲ್ಲಿ ಏನಿತ್ತು? ಶಾಲೆಗಳಲ್ಲಿ ಶಕ್ತಿಯುತ ಬಾಂಬ್ ಇಡಲಾಗಿದೆ, ತಮಾಷೆ ಮಾಡುತ್ತಿಲ್ಲ. ಪವರ್ಫುಲ್ ಬಾಂಬ್ ಇಡಲಾಗಿದೆ. ಕೂಡಲೇ ಪೊಲೀಸರು ಕರೆ ಮಾಡಿ. ನೂರಾರು ಮಕ್ಕಳನ್ನು ಕಾಪಾಡಿ. ಎಲ್ಲವೂ ನಿಮ್ಮ ಕೈಯಲ್ಲಿದೆ ಎಂದು ದುಷ್ಕರ್ಮಿಗಳು ಆಯಾ ಶಾಲಾ ಆಡಳಿತ ಮಂಡಳಿಗೆ ಬೆದರಿಕೆ ಕರೆ ಹಾಕಿದ್ದರು.
2. ಯಾವ್ಯಾವ ಶಾಲೆಗಳಿಗೆ ಬೆದರಿಕೆ? ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ವರ್ತೂರಿನ ಡೆಲ್ಲಿ ಪಬ್ಲಿಕ್ ಶಾಲೆ, ಮಾರತ್ಹಳ್ಳಿ ನ್ಯೂ ಅಕಾಡೆಮಿ ಶಾಲೆ, ಹೆಣ್ಣೂರಿನ ಸೆಂಟ್ ವಿನ್ಸೆಂಟ್ ಸ್ಕೂಲ್, ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ಹೆಬ್ಬಗೋಡಿ ಎಬಿನೈಜರ್ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.
3. ಹುಸಿ ಬಾಂಬ್ ಕರೆ ಸಾಬೀತು: ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಿದರು. ಶಾಲೆಯ ಪ್ರತಿ ಇಂಚಿಂಚೂ ಜಾಲಾಡಿದರು. ಅನುಮಾನಸ್ಪಾದವಾಗಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿಕೊಂಡು ವಾಪಸ್ ತೆರಳಿದರು.
4. ಸ್ಫೋಟಕ ಕಂಡುಬಂದಿಲ್ಲ- ಪೊಲೀಸರು: ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್, ನಗರದ ಖಾಸಗಿ ಶಾಲೆಗಳಿಗೆ ಇ-ಮೇಲ್ ಮುಖಾಂತರ ಬಾಂಬ್ ಕರೆ ಸಂದೇಶ ಬಂದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
5. ಪೋಷಕರಿಗೆ ಆತಂಕ ಬೇಡ: ಎಸ್ಎಸ್ಎಲ್ಸಿ ಪರೀಕ್ಷೆ ಸಮಯದಲ್ಲಿ ಇಂತಹ ಬಾಂಬ್ ಕರೆ ಸಂದೇಶ ಬರುವುದು ಸಹಜ. ತಪಾಸಣೆ ನಡೆಸಿದಾಗ ಹುಸಿ ಬಾಂಬ್ ಕರೆ ಎಂದು ಸಾಬೀತಾಗಿದೆ. ಬೇರೆ ಬೇರೆ ಇ-ಮೇಲ್ ಐಡಿ ಮೂಲಕ ಆರೋಪಿ ಮೇಲ್ ಕಳಿಸಿದ್ದಾನೆ. ಸದ್ಯ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು. ಬಾಂಬ್ ಬೆದರಿಕೆ ಬಗ್ಗೆ ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 6 ಶಾಲೆಗಳಿಗೆ ಬಾಂಬ್ ಬೆದರಿಕೆ.. ಕಮಿಷನರ್ ಪಂತ್ ಹೀಗೆ ಹೇಳಿದರು..