ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಪತ್ರ ಬಂದ ಹಿನ್ನೆಲೆಯಲ್ಲಿ ಕೆಲಕಾಲ ತೀವ್ರ ಆತಂಕಕ್ಕೆ ಒಳಗಾಗುವಂತಾಯಿತು.
ಇಂದು ಸಂಜೆ 5 ಗಂಟೆ ಸುಮಾರಿಗೆ ಸಿಟಿ ಸಿವಿಲ್ ಕೋರ್ಟ್ ಹಾಲ್ ನಂಬರ್ 36ಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ವೈರ್ಗಳಿರುವುದು ಕಂಡು ತೀವ್ರ ಆತಂಕಕ್ಕೊಳಗಾಗಿ ಜಡ್ಜ್ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸರ ಜೊತೆಗೆ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಅದು ಹುಸಿ ಬಾಂಬ್ ಪತ್ರ ಎಂಬುವುದು ಗೊತ್ತಾಗಿದೆ. ಹುಸಿ ಬಾಂಬ್ ಕರೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಗೆ ಹಸ್ತಾಂತರವಾಗಿದೆ.
ಪೊಲೀಸ್ ಕಮೀಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಇನ್ನೆರಡು ಪತ್ರಗಳು ಕಳುಹಿಸಿದ್ದಾರೆ. ಪತ್ರದ ಜೊತೆಗೆ ಡಿಟೋನೆಟರ್ ಮಾದರಿಯ ವಸ್ತು ಹಾಗೂ ವೈರ್ಗಳು ಸಿಕ್ಕಿದ್ದು ಸದ್ಯ ಸಿಕ್ಕ ವಸ್ತುಗಳು ಎಫ್ಎಸ್ಎಲ್ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೇ ಸಿಸಿಬಿ ತನಿಖೆ ನಡೆಸುತ್ತಿರುವ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ.ಹಳ್ಳಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಪತ್ರ ಬಂದಿದೆ. ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಅಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.