ಬೆಂಗಳೂರು: ಸಿಲಿಕಾನ್ ಸಿಟಿ ಹಾಗೂ ರಾಜ್ಯದಲ್ಲಿ ಉಗ್ರರ ಕರಿನೆರಳು ಇರುವ ಬೆನ್ನಲ್ಲೇ ರೈಲ್ವೆ ಸ್ಟೇಷನ್, ಮೆಟ್ರೋ ಸ್ಟೇಷನ್ಗಳಲ್ಲಿ ಐಸಿಸ್ ಉಗ್ರರ ಸಹಾಯದಿಂದ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿದೆ. @gurukerala.rameshwar.sripada ಎಂಬ ಟ್ವಿಟ್ಟರ್ ಖಾತೆಯಿಂದ ಬೆದರಿಕೆ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಸ್ಟ್ ವೈರಲ್ ಹಿನ್ನೆಲೆ ಎಚ್ಚೆತ್ತುಕೊಂಡ ರಾಜ್ಯ ಗುಪ್ತಚರ ಇಲಾಖೆ ಯಶವಂತಪುರ, ಬೆಂಗಳೂರು ಮೆಟ್ರೋ ಸ್ಟೇಷನ್, ವಿಧಾನಸೌಧ ಸೇರಿದಂತೆ ಅಗತ್ಯ ಕಡೆ ಭೇಟಿ ನೀಡಿ ಭದ್ರತೆ ಕೈಗೊಂಡಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿ ಈ ಮೂಲಕ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ನಾನು ಭಾರತದ ಯಾವುದೇ ಮೂಲೆಯಲ್ಲಿ ಬೇಕಾದ್ರೂ ರೈಲು ಸ್ಫೋಟಿಸಬಹುದು, ಎಚ್ಚರಿಕೆಯಿಂದಿರಿ ಎಂದಿದ್ದಾನೆ.
![bomb blast threat to bangalore](https://etvbharatimages.akamaized.net/etvbharat/prod-images/8588209_640_8588209_1598597611702.png)
ಈ ರೀತಿ ಬೆದರಿಕೆಯ ಪೋಸ್ಟ್ ಹಿನ್ನಲೆ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ, ಗುಪ್ತಚರ ಇಲಾಖೆ, ಅಂತರಿಕ ಭದ್ರತಾ ವಿಭಾಗಕ್ಕೆ ರಾಜ್ಯಾದ್ಯಂತ ಅಲರ್ಟ್ ಇರುವಂತೆ ಸೂಚಿಸಲಾಗಿದೆ. ಸದ್ಯ ಪೋಸ್ಟ್ ಮಾಡಿದ ವ್ಯಕ್ತಿಗಾಗಿ ರಾಜ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಉಗ್ರರು ಬೀಡು ಬಿಟ್ಟಿದ್ದಾರೆ. ಹೀಗಾಗಿ ಎನ್ಐಎ ಕೂಡ ಶೋಧ ನಡೆಸಿ ಕೆಲವರನ್ನ ಮಟ್ಟ ಹಾಕಿದ್ದರು. ಸದ್ಯ ಈ ಸಂದೇಶದಿಂದ ಪ್ರತಿಯೊಬ್ಬ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಈ ಹಿಂದೆ ಕೂಡ ವಿನಾಕಾರಣ ಕಿಡಿಗೆಡಿಗಳು ಈ ರೀತಿಯ ಪೋಸ್ಟ್ ಮಾಡಿದ್ದರು. ಇದು ಎಷ್ಟರ ಮಟ್ಟಿಗೆ ನಿಜ ಅನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.