ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೆ ವ್ಯಾಪಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ಸದ್ಯ ಲಾಕ್ಡೌನ್ ಜಾರಿ ಮಾಡಿದೆ. ಜೂ. 7ರ ತನಕ ಲಾಕ್ಡೌನ್ ಮಾರ್ಗಸೂಚಿ ಮುಂದುವರೆಯಲಿದೆ. ಸರ್ಕಾರ ವಿಧಿಸಿರುವ ಕಠಿಣ ಕ್ರಮಗಳನ್ನು ತೆರವುಗೊಳಿಸಿದ ನಂತರ ಬಿಎಂಟಿಸಿಯು ಬೆಂಗಳೂರು ನಗರ ಹಾಗೂ ಹೊರವಲಯದ ಭಾಗಗಳಿಗೆ ಸಾರಿಗೆ ಸೇವೆಗಳನ್ನು ಪುನಾರರಂಭಿಸಲು ಯೋಜಿಸಿದೆ.
ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕ ಪ್ರಯಾಣಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಕಾರಣದಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಮುಂಚೂಣಿ ಕರ್ತವ್ಯ ನಿರ್ವಹಿಸುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ತಮ್ಮ ಕುಟುಂಬ, ಸಾರ್ವಜನಿಕ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ.
ಈ ಸಂಬಂಧ ಸರ್ಕಾರವು ರಾಜ್ಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಲಸಿಕೆಗಳನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಅಲ್ಲದೆ ಸಂಸ್ಥೆಯ ಸಿಬ್ಬಂದಿಗೆ ಅನುಕೂಲವಾಗುವಂತೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿಗಮದ ವಿವಿಧ ಘಟಕ/ಕೇಂದ್ರಗಳಲ್ಲೂ ಸಹ ಲಸಿಕೆಗಳನ್ನು ನೀಡಲಾಗುತ್ತಿದ್ದು, ಸಿಬ್ಬಂದಿ ತಮಗೆ ಅನುಕೂಲವಾಗುವ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ತಿಳಿಸಲಾಗಿದೆ.
ಇನ್ನು ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿರುವ ಬಿಎಂಟಿಸಿ ಸಂಸ್ಥೆಯ ಸಿಬ್ಬಂದಿ, ನಿಗದಿತ ಕಾಲಮಿತಿಯೊಳಗೆ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಹಾಗೆಯೇ ಇದುವರೆಗೂ ಲಸಿಕೆ ಪಡೆಯದಿರುವ ಸಿಬ್ಬಂದಿ ಕೂಡಲೇ ಮೊದಲನೇ ಡೋಸ್ ಪಡೆದುಕೊಳ್ಳಬೇಕು. ಲಾಕ್ಡೌನ್ ಮುಗಿದ ನಂತರ ಸಂಸ್ಥೆಯ ವಾಹನಗಳ ದೈನಂದಿನ ಕಾರ್ಯಾಚರಣೆ ಪ್ರಾರಂಭವಾಗುವ ಸಮಯದಲ್ಲಿ ಲಸಿಕೆ ಪಡೆದಿರುವ ಸಿಬ್ಬಂದಿಗೆ ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಲಸಿಕೆ ಪಡೆದಿರುವ ಎಸ್ಎಂಎಸ್ಅನ್ನು ಪರಿಶೀಲಿಸಿ, ನಂತರ ಕೆಲಸಕ್ಕೆ ನಿಯೋಜಿಸುವಂತೆ ನಿಗಮದ ನಿರ್ದೇಶಕರು ಆದೇಶಿಸಿದ್ದಾರೆ.
ಈ ಕುರಿತು ಸಾರಿಗೆ ನೌಕರರ ಒಕ್ಕೂಟದ ಆನಂದ್ ಕೂಡ ಪ್ರತಿಕ್ರಿಯಿಸಿದ್ದು, ಕೊರೊನಾ ಹೆದರಿಸಲು ಲಸಿಕೆ ಅನಿರ್ವಾಯ. ಹೀಗಾಗಿ ನಿಗಮ ನೀಡಿರುವ ಅವಕಾಶವನ್ನ ಬಳಕೆ ಮಾಡಿಕೊಂಡು ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.