ಬೆಂಗಳೂರು: 2022-23ನೇ ಸಾಲಿನ ಅಂತಿಮ ಸೆಮಿಸ್ಟರ್ ಪದವಿ, ವೃತ್ತಿಪರ, ಸ್ನಾತಕೋತ್ತರ, ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತೆ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿ ಬಿಎಂಟಿಸಿ ಆದೇಶಿಸಿದೆ. ಸೆಮಿಸ್ಟರ್ ಪದವಿ, ವೃತ್ತಿಪರ, ಸ್ನಾತಕೋತ್ತರ, ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಮತ್ತು ಪರೀಕ್ಷೆಗಳು ಇನ್ನೂ ಮುಕ್ತಾಯವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಿಸುವಂತೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಬಿಎಂಟಿಸಿಯನ್ನು ಮನವಿ ಮಾಡಿಕೊಂಡಿದ್ದವು. ಹೀಗಾಗಿ 2022-23ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸಿನ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ, ಸಾಮಾನ್ಯ ಸೇವೆ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ಆದೇಶದಲ್ಲಿ ತಿಳಿಸಿದೆ.
ಮಹಿಳೆಯರ ಉಚಿತ ಬಸ್ ಪಾಸ್ಗೆ ಆಟೋ ಚಾಲಕರಿಂದ ಖಂಡನೆ: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ತಂದಿರುವುದು ಮಹಿಳೆಯರಿಗೆ ಪ್ರಯೋಜನವಾಗುತ್ತಿದ್ದರೆ, ಆಟೋ ಚಾಲಕರು ಖಾಸಗಿ ಬಸ್ನವರು ನಷ್ಟಕ್ಕೆ ಒಳಗಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಇದೇ ವಿಚಾರವಾಗಿ ಜೂನ್ ತಿಂಗಳಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯಿಂದ ಆಟೋ ಚಾಲಕರಿಗೆ ಕೆಲಸ ಇಲ್ಲದಂತಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಉಚಿತ ಬಸ್ಗೆ ಅವಕಾಶ ನೀಡಬಾರದು ಎಂದು ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದರು.
ಬಡ ಆಟೋ ಚಾಲಕರು ದಿನಕ್ಕೆ ಇನ್ನೂರು - ಮುನ್ನೂರು ರೂಪಾಯಿಗಳನ್ನು ದುಡಿದು ತಿನ್ನುವವರು. ಈಗಾಗಲೇ ಕೋವಿಡ್ನಿಂದ ಬಹಳಷ್ಟು ಆಟೋ ಚಾಲಕರು ಕುಟುಂಬಗಳು ತೊಂದರೆ ಅನುಭವಿಸಿವೆ. ಆಗ ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನಗರ ಹೊರತುಪಡಿಸಿ ಹೊರಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದ್ದರು.
ಹಿಂದಿನ ಸರ್ಕಾರ ಬಡ ಆಟೋ ಚಾಲಕರಿಗೆ ಏನೂ ಮಾಡಿಲ್ಲ. ಇಂದು ಗ್ಯಾಸ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಉಚಿತ ವಿದ್ಯುತ್ ಕೂಡ 75 ಪೈಸೆ ಹೆಚ್ಚಳವಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದು ನಮಗೆ ಒಪ್ಪಿಗೆ ಇಲ್ಲ. ಆಟೋ ರಿಕ್ಷಾ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ನೀಡಬೇಕು. ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ಉಚಿತವಾಗಿ ನೀಡಬೇಕು. ಚಾಲಕರು ಅಪಘಾತದಲ್ಲಿ ಸಾವನ್ನಪ್ಪಿದರೆ 5 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ: ಶುಲ್ಕ ಪಾವತಿಸಿದ ರಸೀದಿ ತೋರಿಸಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ..