ಬೆಂಗಳೂರು: ಬಿಎಂಟಿಸಿ ನೌಕರರಾದ ಸತೀಶ್ ತಮ್ಮ ಕೆಲಸದ ಒತ್ತಡದ ನಡುವೆಯೂ ಬಿ.ಕೆ.ಎಸ್ ಐಯ್ಯಂಗಾರ್ ಅವರ ಪುಸ್ತಕವನ್ನು ಓದಿ ಮತ್ತು ಡಾ. ರಾಜ್ಕುಮಾರ್ ಅವರ ಚಿತ್ರ ನೋಡಿ ಯೋಗವನ್ನು ಕಲಿತು ಪ್ರತಿನಿತ್ಯ ಯೋಗಾಸನ ಮಾಡುತ್ತಿದ್ದಾರೆ.
ನಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ನಾವೇ ಉಪಾಯ ಹುಡುಕಿಕೊಳ್ಳಬೇಕು ಎಂದುಕೊಂಡ ಸತೀಶ್, ಪುಸ್ತಕ ಮತ್ತು ಡಾ. ರಾಜ್ಕುಮಾರ್ ಅವರ ಸಿನಿಮಾ ನೋಡಿ ಯೋಗ ಕಲಿತಿದ್ದಾರೆ. ಇವರು ಮಾಡುವ ಯೋಗಾಸನದ ಭಂಗಿಗಳನ್ನು ನೋಡಿದ್ರೆ ರಾಜ್ಕುಮಾರ್ ಅಭಿನಯದ ಕಾಮನಬಿಲ್ಲು ಚಿತ್ರ ನೆನಪಾಗುವುದಂತೂ ನಿಜ.
ಕಾಮನಬಿಲ್ಲು ಚಿತ್ರದಲ್ಲಿ ಡಾ. ರಾಜ್ರಂತೆ 360 ಡಿಗ್ರಿಯಲ್ಲಿ ಹೊಟ್ಟೆ ತಿರುಗಿಸುವ ಸತೀಶ್, ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡಿದ್ದಾರೆ. ಅಣ್ಣಾವ್ರಂತೇಯೆ ನೌಲಿ ಕ್ರಿಯೆಯನ್ನು ಬಲು ಸರಳವಾಗಿ ಮಾಡುತ್ತಾರೆ. ಸತೀಶ್ 1996ರಲ್ಲಿ ಯೋಗಾಸನ ಪ್ರಾರಂಭಿಸಿದ್ದು, ಇಂದಿಗೂ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿನಿತ್ಯ 3 ಗಂಟೆಗಳ ಕಾಲ ಧ್ಯಾನ ಮಾಡುವುದರ ಜೊತೆಗೆ ನೂರಾರು ಭಂಗಿಯ ಆಸನಗಳನ್ನು ಮಾಡುತ್ತಾರೆ.
ಇದನ್ನು ಓದಿ:ಭಾರತ್ ಬಂದ್ ಹಿನ್ನೆಲೆ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ರಿಂದ ತುರ್ತು ಸಭೆ
ಯೋಗಾಸನದಲ್ಲಿ ಗಿನ್ನೆಸ್ ದಾಖಲೆ ಮಾಡಬೇಕೆಂಬ ಗುರಿಯನ್ನು ಸತೀಶ್ ಹೊಂದಿದ್ದಾರೆ. ಅಲ್ಲದೆ ಅವರ ಪ್ರತಿಭೆಯನ್ನು ಕಂಡು ಸಾರಿಗೆ ನಿಗಮ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.