ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್‌ಗಳ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನ ಹಾಕುವುದು ತಕ್ಷಣದಿಂದಲೇ ನಿರ್ಬಂಧಿಸಿ ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.
ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 35.77 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ, ಕೆಲವರು ಕಿರಿಕಿರಿ ಆಗುವಂತೆ ಮೊಬೈಲ್ನಲ್ಲಿ ಲೌಡ್ ಸ್ಪೀಕರ್ ಹಾಕಿ ಹಾಡುಗಳನ್ನು ಕೇಳುತ್ತಾರೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 94(I) (V)ರ ಪ್ರಕಾರ ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ, ಕೆಎಸ್ಆರ್ಟಿಸಿ ಮತ್ತು ಇಂಡಿಯನ್ ರೈಲ್ವೆಗಳಲ್ಲಿ, ಬೇರೆಯವರಿಗೆ ಕಿರಿಕಿರಿಯಾಗುವಂತೆ ಶಬ್ದ ಮಾಲಿನ್ಯ ಮಾಡುವಂತಿಲ್ಲ. ಇದರನ್ವಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಆದ್ದರಿಂದ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ ಈ ಕುರಿತು ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳುವಳಿಕೆ ನೀಡುವಂತೆ ತಿಳಿಸಲಾಗಿದೆ. ಈ ಮಾಹಿತಿಯನ್ನ ಪ್ರಯಾಣಿಕರಿಗೆ ತಲುಪಿಸಲು ಸಾರ್ವಜನಿಕ ಸಂಪರ್ಕಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಂಸ್ಥೆ ವಾಹನಗಳಲ್ಲಿ ಸ್ಟಿಕ್ಕರಿಂಗ್ ಮೂಲಕ ಮಾಹಿತಿಯನ್ನು ಪ್ರದರ್ಶಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.