ಬೆಂಗಳೂರು: ವಿವಾದಿತ ಬಿಎಂಎಸ್ ಖಾಸಗಿ ವಿವಿ ವಿಧೇಯಕಕ್ಕೆ ಜೆಡಿಎಸ್ ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು. ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನ ಅಡಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲು ‘ಬಿಎಂಎಸ್ ವಿಶ್ವವಿದ್ಯಾಲಯ ವಿಧೇಯಕ –2023 ಅಂಗೀಕಸಲಾಯಿತು. ಒಂದು ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯ ಸ್ಥಾಪಿಸುವ ಹಕ್ಕನ್ನು ಬಿಎಂಎಸ್ ಎಜುಕೇಷನಲ್ ಟ್ರಸ್ಟ್ ಹೊಂದಲಿದೆ.
ಕುಮಾರಸ್ವಾಮಿ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಬಿಎಂಎಸ್ ಟ್ರಸ್ಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಅಧಿವೇಶನದಲ್ಲಿ ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನ ಕಾರ್ಯವೈಖರಿ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ದಾಖಲೆ ಸಮೇತ ಅರೋಪ ಮಾಡಿದ್ದರು. ಈ ವಿಚಾರ ಹೆಚ್ ಡಿ ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿತ್ತು.
ಆರೋಪ ಏನು ?: ದಯಾನಂದ ಪೈ ಬಿಎಂಎಸ್ ಶಿಕ್ಷಣ ಸಂಸ್ಥೆಯ ಸಂಪೂರ್ಣ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರ ಬೆಂಬಲವಿದೆ ಮತ್ತು ಕಾಣದ ಕೈಗಳು ಟ್ರಸ್ಟಿಗಳ ಬದಲಾವಣೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿಸಿಕೊಂಡಿವೆ. ಭಾರಿ ಅಕ್ರಮ ನಡೆದಿರುವುದರಿಂದ ಟ್ರಸ್ಟ್ ಮತ್ತು ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದರು.
ಜೆಡಿಎಸ್ ಸದಸ್ಯರ ತೀವ್ರ ವಿರೋಧದ ಮಧ್ಯೆ ಉನ್ನತ ಶಿಕ್ಷಣ ಸಚಿವ ಸಚಿವ ಅಶ್ವಥ್ ನಾರಾಯಣ್ ವಿಧೇಯಕವನ್ನು ಮಂಡಿಸಿದರು. ಜೆಡಿಎಸ್ ಪಕ್ಷದ ವಿಧಾನಸಭೆ ಉಪನಾಯಕ ಇದನ್ನು ಅಂಗೀಕಾರ ಮಾಡದಂತೆ ಮನವಿ ಮಾಡಿದರು. ಈ ಟ್ರಸ್ಟ್ ಬಗ್ಗೆ ಈಗಾಗಲೇ ಆರೋಪ ಇದೆ. ಇದು ಬೇನಾಮಿ ಮತ್ತು ಅಕ್ರಮ ಟ್ರಸ್ಟ್ ಆಗಿದೆ. ಹಾಗಾಗಿ ಇದನ್ನು ಜಾರಿಗೆ ತರಲು ಬಿಡಬೇಡಿ ಅಂತ ಜೆಡಿಎಸ್ ಶಾಸಕರು ಒಕ್ಕೊರಲಿನಿಂದ ಆಗ್ರಹಿಸಿದರು.
ಇದನ್ನೂ ಓದಿ: ಎನ್ಎಚ್ಎಂ ಯೋಜನೆಯಡಿ ನೇಮಕವಾಗಿರುವ ನೌಕರರ ವೇತನ ಶೇ.15 ರಷ್ಟು ಹೆಚ್ಚಳ: ಸಚಿವ ಡಾ.ಸುಧಾಕರ್
ಈ ಮಧ್ಯೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ನಾನು ಇಲ್ಲಿ ಪರ ವಿರೋಧ ಇಲ್ಲ. ಟ್ರಸ್ಟ್ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಟ್ರಸ್ಟ್ ಯಾರದ್ದು ಅಂತ ನಿರ್ಧಾರ ಆದ ಮೇಲೆ ವಿವಿ ಯಾರಿಗೆ ಸೇರಬೇಕು ಅನ್ನೋದು ನಿರ್ಧಾರ ಆಗಲಿದೆ. ಆ ವಿವಾದಕ್ಕೂ, ಇದಕ್ಕೂ ಸಂಬಂಧ ಇಲ್ಲ. ಬಿಎಂಎಸ್ ಶಿಕ್ಷಣ ಸಂಸ್ಥೆಗಳಲ್ಲಿ 20 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಯೂನಿವರ್ಸಿಟಿ ಆಗಿ ಮಾನ್ಯತೆ ಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭಾತ್ಯಾಗದ ನಡುವೆ ಅಂಗೀಕಾರ: ಇದಕ್ಕೆ ಕಿವಿಗೊಡದ ಜೆಡಿಎಸ್ ಸದಸ್ಯರು ಈ ಟ್ರಸ್ಟ್ ವಿವಾದದಲ್ಲಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿದರು. ಜೆಡಿಎಸ್ ಸದಸ್ಯರು ಇದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಅದರ ನಡುವೆ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು. ಇದೇ ವೇಳೆ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಲೇಖಾನುದಾನಕ್ಕೆ ಅಂಗೀಕಾರ ಪಡೆಯಲಾಯಿತು. ಇನ್ನು 2023ರ ಕರ್ನಾಟಕ ವೃತ್ತಿಗಳ, ಕಸುಬುಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ (ತಿದ್ದುಪಡಿ) ವಿಧೇಯಕವನ್ನೂ ಅಂಗೀಕರಿಸಲಾಯಿತು.
ಇದನ್ನೂ ಓದಿ: ಪ.ಜಾತಿ, ಪಂಗಡದ ಮಕ್ಕಳು ಶುಲ್ಕ ಪಾವತಿಸಿಲ್ಲವೆಂದು ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ- ಸೂಚನೆ