ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ಸಂಭವಿಸಿದ ಸ್ಫೋಟ ಸಂಬಂಧ ತನಿಖೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು, ದುರಂತಕ್ಕೆ ಪಟಾಕಿಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಇಂದು ಬೆಳಗ್ಗೆ ನಡೆದ ದುರಂತದಲ್ಲಿ ಇಬ್ಬರು ಮೃತಪಟ್ಟರೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟ ಸಂಬಂಧ ಹತ್ತಾರು ವಾಹನಗಳಿಗೆ ಹಾಗೂ ಮನೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿ ಎಫ್ಎಸ್ಎಲ್ ತಂಡ ಪರಿಶೀಲಿಸಿದೆ. ಈ ವೇಳೆ ಮೇಲ್ನೋಟಕ್ಕೆ ಶ್ರೀಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಶಾಪ್ ನಲ್ಲಿ ಸುರಕ್ಷಿತವಾಗಿ ಇಟ್ಟಿರದ ಸ್ಥಿತಿಯಲ್ಲಿ ಇದ್ದಿದ್ದರಿಂದ ರೀಲ್ ಪಟಾಕಿ ಇದ್ದ ಬಾಕ್ಸ್ ಸಾಗಿಸುವಾಗ ಕೆಳಬಿದ್ದು ಒತ್ತಡ ಸೃಷ್ಟಿಯಾಗಿ ದೊಡ್ಡಮಟ್ಟದಲ್ಲಿ ಶಬ್ಧ ಉಂಟಾಗಿ ಅವಾಂತರಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಮಾಲೀಕ ಅರೆಸ್ಟ್:
ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಣಪತಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಲೀಕ ಗಣೇಶ್ ಬಾಬು ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ದೂರಿನಲ್ಲಿ ಏನಿದೆ?
ಸುಮಾರು 30 ವರ್ಷಗಳಿಂದ ತಳ್ಳುವ ಗಾಡಿ ಕೆಲಸ ಮಾಡಿಕೊಂಡಿರುವ ಗಣಪತಿಗೆ ಇಂದು ಅವೆನ್ಯೂ ರಸ್ತೆಯ ಕಣ್ಣನ್ ಎಂಬುವರು ಪಟಾಕಿ ತರುವಂತೆ ಸೂಚಿಸಿದ್ದರಿಂದ 'ಪತ್ರಕಾಳಿ ಅಮ್ಮನ್ ಲಾರಿ ಸರ್ವಿಸ್ ಶಾಪ್' ಬಳಿ ಬೆಳಗ್ಗೆ 11.30ಕ್ಕೆ ಹೋಗಿದ್ದೆ. ಕೈಗಾಡಿ ನಿಲ್ಲಿಸಿ ಕಣ್ಣನ್ ಎಂಬುವರು ಪಟಾಕಿ ತರುವಂತೆ ಸೂಚಿಸಿದ್ದಾರೆ ಎಂದು ಮಾಲೀಕ ಗಣೇಶ್ ಬಾಬುಗೆ ವಿಷಯ ತಿಳಿಸಿದ್ದೆ. ಇದರಂತೆ ಗೋದಾಮಿನಲ್ಲಿ 10 ಪಟಾಕಿ ಬಾಕ್ಸ್ಗಳನ್ನ ತಳ್ಳುವ ಗಾಡಿಗೆ ತುಂಬಿದ್ದೆ. ಮತ್ತೆ ಒಳಗೆ ಪಟಾಕಿ ಬಾಕ್ಸ್ ತೆಗೆದುಕೊಳ್ಳಲು ಹೋದಾಗ ಕಚೇರಿಯೊಳಗೆ ದೊಡ್ಡ ಮಟ್ಟದಲ್ಲಿ ಶಬ್ದ ಉಂಟಾದ ಪರಿಣಾಮ ಗಾಡಿ ಮೇಲಿಟ್ಟಿದ್ದ 10 ಪಟಾಕಿ ಬಾಕ್ಸ್ ಗಳು ಸ್ಫೋಟವಾದವು. ಪಕ್ಕದ ಅಂಗಡಿಯ ಅಸ್ಲಾಂಪಾಷಾ ಹಾಗೂ ಮನೋಹರ್ ದೇಹಗಳು ಛಿದ್ರವಾಗಿ ಬಿದ್ದಿದ್ದವು. ನನಗೆ ತಲೆ-ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಕೆಲವರು ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದರು. ಮ. 12 ಗಂಟೆಯಾಗಿದ್ದರಿಂದ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸ್ಫೋಟಕಗಳನ್ನ ಸರಿಯಾಗಿ ಸುರಕ್ಷತೆ ಇಲ್ಲದೇ ಸೂಕ್ತವಾಗಿ ನಿರ್ವಹಣೆ ಮಾಡದೆ ಇಡಲಾಗಿತ್ತು. ಘಟನೆಗೆ ಮಾಲೀಕ ಗಣೇಶ್ ಬಾಬು ನೇರ ಕಾರಣ ಎಂದು ಗಣಪತಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿವಿಪುರಂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭಾರೀ ಸ್ಫೋಟ: ಇಬ್ಬರು ದುರ್ಮರಣ, ಪಕ್ಕದ ಮನೆಗಳಿಗೆ ಹಾನಿ