ಬೆಂಗಳೂರು: ಎಸಿಬಿ ಡಿವೈಎಸ್ಪಿ ಹೆಸರಲ್ಲಿ ರಾಜಕೀಯ ಮುಖಂಡರಿಗೆ ಧಮ್ಕಿ ಹಾಕಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಎಸಿಬಿ ಡಿವೈಎಸ್ಪಿ ಬಾಲರಾಜ್ ಹೆಸರನ್ನು ವ್ಯಕ್ತಿಯೊಬ್ಬ ದುರ್ಬಳಕೆ ಮಾಡಿಕೊಂಡು, ಕರೆ ಮಾಡಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಬಿ ರಿಪೋರ್ಟ್ ಅಥವಾ ಸಿ ರಿಪೋರ್ಟ್ ಹಾಕಬೇಕು ಎಂದು ಸಚಿವ ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಚಾರವಾಗಿ ಅನುಮಾನ ಬಂದು ಎಸಿಬಿ ಡಿವೈಎಸ್ಪಿ ಬಾಲರಾಜ್ ಅವರನ್ನು ಪ್ರಶ್ನೆ ಮಾಡಿದಾಗ ಬಾಲರಾಜ್ ಕರೆ ಮಾಡಿಲ್ಲ ಎಂದು ತಿಳಿಸಿ ಈ ಸಂಬಂಧ ಆರ್ಟಿ ನಗರದಲ್ಲಿ ದೂರು ನೀಡಿದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಇನ್ನು ತನಿಖೆಗೆ ಪೊಲೀಸರು ಇಳಿದಾಗ ಆರೋಪಿ ಮಹಾರಾಷ್ಟ್ರದ ಲಾಡ್ಜ್ನಲ್ಲಿ ಕುಳಿತು ಈ ರೀತಿಯ ಡೀಲ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯ ಹಿನ್ನೆಲೆ:
ಮುರುಗಪ್ಪ ನಿಂಗಪ್ಪ ಕುಂಬಾರ್ ಎಂಬ ಹೆಸರಿನ ಆರೋಪಿ 2017ರಿಂದಲೂ ರಾಜಕೀಯ ಮುಖಂಡರು, ಗುತ್ತಿಗೆದಾರರು, ಎಂಜಿನಿಯರ್ಗಳಿಗೆ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂ. ಹಣ ವಸೂಲಿ ಮಾಡಿದ್ದಾನಂತೆ. 1986ರಲ್ಲಿ ಬೆಳಗಾವಿ ಸಿವಿಲ್ ಪೊಲೀಸ್ ಪೇದೆಯಾಗಿ ಕೆಲಸಕ್ಕೆ ಸೇರಿ ಸವದತ್ತಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ 1996ರಲ್ಲಿ ಲೋಕಾಯುಕ್ತ, ಎಸಿಬಿ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಕರ್ತವ್ಯ ಲೋಪ, ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಅಮಾನಗೊಂಡಿದ್ದ ಎನ್ನಲಾಗಿದೆ.
ಸದ್ಯ ಸಿಸಿಬಿ ಕಾರ್ಯಾಚರಣೆ ನಡೆಸಿ ಆರೋಪಿ ಮುರುಗಪ್ಪನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ತನಿಖೆ ಮುಂದುವರೆಸಿದೆ.