ಬೆಂಗಳೂರು : ಶಿಕ್ಷಣ ಸಚಿವರ ಕಾರ್ಯವೈಖರಿ ವಿರುದ್ಧ ತಿರುಗಿ ಬಿದ್ದಿರುವ ಖಾಸಗಿ ಶಾಲೆಗಳು ಈ ವರ್ಷದ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲು ಮುಂದಾಗಿವೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಪೋಷಕರಿಗೆ ಸರ್ಕಾರಿ ಶಿಕ್ಷಕರು ಸುಳ್ಳು ಭರವಸೆ ನೀಡಿ ಒತ್ತಡ ಹೇರುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗಾಗಿ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳನ್ನು ಆಕರ್ಷಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ಕಟ್ಟದಂತೆ ತಿಳಿಸಲಾಗುತ್ತಿದೆ. ಕೋವಿಡ್ನ ಸಂಕಷ್ಟದಲ್ಲಿ ಖಾಸಗಿ ಶಾಲೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ದ್ರೋಹ ಮಾಡಲಾಗುತ್ತಿದೆ.
ಆದ್ದರಿಂದ ಶಿಕ್ಷಣ ಇಲಾಖೆಯ ಕ್ರಮಗಳನ್ನು ಖಂಡಿಸಿ ನಾಳೆ ಶಿಕ್ಷಕರ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸುವ ಮೂಲಕ ಕರಾಳ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟ (ಕ್ಯಾಮ್ಸ್ )ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಶಾಲೆಗಳು ಆರಂಭವಾಗದ ಕಾರಣ ಸಿಬ್ಬಂದಿಯ ತಿಂಗಳ ವೇತನಕ್ಕೆ ಕತ್ತರಿ ಬಿದ್ದಿದೆ. ಕೇಂದ್ರ ಸರ್ಕಾರ ಆನ್‌ಲಾಕ್ 4 ಜಾರಿ ಮಾಡಿದ್ರೂ ಸಹ ಇನ್ನೂ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಆನ್‌ಲೈನ್ ತರಗತಿ ಮಾಡಲಾಗುತ್ತಿದೆ.
ಇದರಿಂದ ಹಲವು ಶಿಕ್ಷಕರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಖಾಸಗಿ ಅನುದಾನರಹಿತ ಶಿಕ್ಷಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.