ಬೆಂಗಳೂರು: ಸಂಭಾವ್ಯ ಸಚಿವರ ಪಟ್ಟಿ ಸಿದ್ಧ ಪಡಿಸಿಕೊಂಡು ದೆಹಲಿಗೆ ಬರುವಂತೆ ಸಿಎಂ ಬಿಎಸ್ವೈಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮೂಲ ಹಾಗೂ ವಲಸೆ ಬಿಜೆಪಿ ಶಾಸಕರು ದವಳಗಿರಿ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಉಮೇಶ್ ಕತ್ತಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು. ಉಪಚುನಾವಣೆ ಫಲಿತಾಂಶದ ನಂತರ ಪದೇ, ಪದೆ ಮುಖ್ಯಮಂತ್ರಿ ಭೇಟಿ ಮಾಡುತ್ತಿರುವ ಶಾಸಕ, ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅಷ್ಟೇ ಅಲ್ಲದೆ, ಇಂದು ಸೋಮಶೇಖರ್ ರೆಡ್ಡಿ ಸಿ ಎಂ ಭೇಟಿ ಮಾಡಿ ಗೆಳೆಯ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಇನ್ನು ವಲಸಿಗರು ತಮ್ಮ ಹೆಸರು "ಸಂಭಾವ್ಯರ ಪಟ್ಟಿ"ಯಲ್ಲಿ ಇರಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವರಿಕೆ ಮಾಡಲು ಸಿ ಎಂ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಭೇಟಿ ನಡೆಸಿ ಸಚಿವ ಸ್ಥಾನ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಲ್ಲೂ ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿಗರು ಎಂಬ ವೈಮನಸ್ಸಿನ ಕಿಡಿ ಶುರುವಾಗಿದೆ ಎಂದು ಮೂಲಗಳು ಹೇಳಿವೆ.