ಬೆಂಗಳೂರು: ರಾಜ್ಯ ರಾಜಕೀಯ ಮತ್ತು ರಾಷ್ಟ್ರ ರಾಜಕೀಯದ ದೃಷ್ಟಿಯಿಂದ ಹೈಕಮಾಂಡ್ ನನ್ನನ್ನು ಪರಿಷತ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ವಿದ್ಯಾರ್ಥಿ ದಿಸೆಯಿಂದ ಈವರೆಗೆ ಹೈಕಮಾಂಡ್ ಯಾವ ರೀತಿ ಆಯ್ಕೆ ಮಾಡುತ್ತಾರೆ ಎಂಬುದು ಗೊತ್ತಿದೆ. ಹಾಗಾಗಿ ಹೈಕಮಾಂಡ್ ಗೊತ್ತಿಲ್ಲದವರಿಗೆ ಮಾತ್ರ ಹೈಕಮಾಂಡ್ ಬಗ್ಗೆ ಅಚ್ಚರಿ ಆಗಬಹುದು ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನ ಹೆಸರನ್ನು ಕಳಿಸಿದ್ದರು. ಅದನ್ನು ಪರಿಗಣಿಸಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ನನಗೆ ಪರಿಷತ್ ಟಿಕೆಟ್ ನೀಡಿದ್ದಾರೆ ಎಂದರು.
ನನ್ನ ಆಯ್ಕೆಯಿಂದ ಆಕಾಂಕ್ಷಿಗಳಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಜೊತೆಗೆ ಸಿದ್ದರಾಮಯ್ಯ ವಿರುದ್ಧ ನಮಗೆ ಯಾವುದೇ ಅಸಮಾಧಾನ ಇಲ್ಲ. ಇದು ರಾಜಕೀಯ ಪಕ್ಷದ ಕುಚೋದ್ಯ ಮತ್ತು ಅಪ್ರಚಾರದ ಮಾತು ಅಷ್ಟೇ ಎಂದು ಹರಿಪ್ರಸಾದ್ ತಿಳಿಸಿದರು.