ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಫಲತೆಯ ಶ್ರೇಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಉದಯಪುರದಲ್ಲಿ ನಡೆದ ಸಭೆಯಲ್ಲಿ ದೇಶದ ಜ್ವಲಂತ ಆರ್ಥಿಕ ಸಮಸ್ಯೆಗಳ ಬಗ್ಗೆ ಏನು ಮಾಡಬೇಕು ಅನ್ನೋದರ ಕುರಿತು ಚರ್ಚಿಸಲಾಗಿತ್ತು. ಜನರ ಬಳಿ ನೇರವಾಗಿ ಹೋಗಬೇಕೆಂದು ಈ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜೋಡೋ ಯಾತ್ರೆ ಪ್ರಾರಂಭಿಸಿದ್ವಿ ಎಂದರು.
ಬಿಜೆಪಿಗೆ ಎಷ್ಟು ದಿಕ್ಕುಗಳಿವೆ?: ಕಾಂಗ್ರೆಸ್‌ನಲ್ಲಿ ಡಿಕೆಶಿ ಒಂದು ದಿಕ್ಕು ಸಿದ್ದರಾಮಯ್ಯ ಇನ್ನೊಂದು ದಿಕ್ಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೌದು, ಕಾಂಗ್ರೆಸ್ ಪಕ್ಷದಲ್ಲಿ ಎರಡು ದಿಕ್ಕು ಇದೆ ಎಂದು ಒಪ್ಪಿಕೊಳ್ಳೊಣ. ಆದರೆ ಬಿಜೆಪಿ ಪಕ್ಷದಲ್ಲಿ ಎಷ್ಟು ದಿಕ್ಕುಗಳಿವೆ? ಸದ್ಯ ಬಿಜೆಪಿಯವರು ದಿಕ್ಕುಪಾಲಾಗಿದ್ದಾರೆ. ಬಿಜೆಪಿಯ ಒಬ್ಬೊಬ್ಬ ನಾಯಕ ಒಂದೊಂದು ದಿಕ್ಕಿನಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ನಂದೀಶ್ ಸಾವಿನ ತನಿಖೆಯಾಗಲಿ: ಪೊಲೀಸ್ ಇನ್ಸ್ ಪೆಕ್ಟರ್ ಹೃದಯಾಘಾತ ಪ್ರಕರಣ ಕುರಿತು ಮಾತನಾಡಿದ ಅವರು, ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ತನಿಖೆ ಆಗಬೇಕು. ಒಂದು ಬಾರ್ ವಿಚಾರಕ್ಕೆ ಅಮಾನತು ಮಾಡುವಷ್ಟೇ ನಡೆದಿಲ್ಲ. ಇದರ ಹಿಂದೆ ಇನ್ನೂ ಬೇರೇನೋ ಇದ್ದಂತಿದೆ. ನಾನು ಮೊದಲೇ ಹೇಳಿದ್ದೆ. ಒಂದು ಪೋಸ್ಟಿಂಗ್‌ಗೆ 70 ಲಕ್ಷದಿಂದ 2 ಕೋಟಿ ರೂ ತನಕ ಹಣದ ವಿಚಾರ ಇದೆ. ಇದು ಬಿಜೆಪಿಯ ಸಂಸ್ಕೃತಿ, ಗಂಭೀರವಾದ ವಿಚಾರ. ನಂದೀಶ್ ಅಮಾನತಿನ ಹಿಂದೆ ಅಷ್ಟೇ ಇದ್ದಂತೆ ಇಲ್ಲ, ಅದಕ್ಕಿಂತ ಹೆಚ್ಚಿನದು ಬೇರೆನೋ ಇದೆ. ಹೀಗಾಗಿ ಅವರ ಸಾವಿನ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.
ನ.6ರಂದು ಖರ್ಗೆ ಅವರಿಗೆ ಬೆಂಗಳೂರಿಗೆ ಅದ್ಧೂರಿ ಸ್ವಾಗತ: ನವೆಂಬರ್ 6 ಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬೆಂಗಳೂರು ನಗರದಲ್ಲಿ ಅದ್ದೂರಿ ಸ್ವಾಗತ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಮರು ಆಯ್ಕೆ