ಬೆಂಗಳೂರು: ಬಿಜೆಪಿಯ ಮುಖಂಡರಾಗಿದ್ದ ಮಾಜಿ ಸಚಿವ ಹಾಗು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದ ಬಿಜೆ ಪುಟ್ಟಸ್ವಾಮಿ ರಾಜಕಾರಣದಿಂದಲೇ ನಿವೃತ್ತಿ ಘೋಷಿಸಿದ್ದು, ನಾಳೆ ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ.
ಐವತ್ತು ವರ್ಷಗಳ ಸುದೀರ್ಘ ರಾಜಕಾರಣಕ್ಕೆ ಮಾಜಿ ಸಚಿವ ಪುಟ್ಟಸ್ವಾಮಿ ವಿದಾಯ ಹೇಳಿದ್ದು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಪ್ರಥಮ ಪೀಠಾಧ್ಯಕ್ಷರಾಗಿ ಮೇ.15 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗಾಣಿಗರ ಮಠದ ಪೀಠಾಧಿಪತಿಯಾಗಿ ಸಮಾಜ ಸುಧಾರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಉದ್ದೇಶದಿಂದಲೇ ರಾಜಕಾರಣ ತೊರೆದಿದ್ದೇನೆ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿರುವ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ವ ಪ್ರೇರಣೆಯಿಂದ ಏಪ್ರಿಲ್ 30 ರಂದು ರಾಜೀನಾಮೆ ನೀಡಲಾಗಿದೆ. ನಾಳೆ ಸನ್ಯಾಸ ದೀಕ್ಷೆಯನ್ನು ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಕೈಲಾಸ ಮಠದ ಜಯತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಾಗುವುದೆಂದು ಬಿ ಜೆ ಪುಟ್ಟಸ್ವಾಮಿ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಸನ್ಯಾಸ ದೀಕ್ಷೆ ಪಡೆಯುವ ಮುನ್ನ ಇಂದು ಗುರುವಾರ ರಾಜರಾಜೇಶ್ವರಿ ದೇವಸ್ಥಾನದ ಕೈಲಾಅ ಆಶ್ರಮದಲ್ಲಿ ಪುಟ್ಟಸ್ವಾಮಿ ಅವರಿಗೆ ಬ್ರಹ್ಮಚರ್ಯ ದೀಕ್ಷೆ ನೀಡಲಾಯಿತು.ನಾಳೆ ಸನ್ಯಾಸ ದೀಕ್ಷೆ ಪಡೆದ ನಂತರ ಈ ತಿಂಗಳ 15 ರಂದು ಗಾಣಿಗ ಮಹಾಸಂಸ್ಥಾನ ಮಠದಲ್ಲಿ ಪುಟ್ಟಸ್ವಾಮಿ ಅವರ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕಾರಣಿಗಳು, ವಿವಿಧ ಮಠಾಧೀಶರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ.. ಬಸ್ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದುರ್ಮರಣ