ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದ್ದು, ಯಾವಾಗ ಚುನಾವಣೆ ಬಂದರೂ ಎದುರಿಸಲು ಸನ್ನದ್ದರಾಗಿದ್ದೇವೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಬೆಂಗಳೂರು ಸಚಿವರು ಮತ್ತು ಶಾಸಕರ ಸಭೆ ನಡೆಸಲಾಯಿತು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ಸಿದ್ಧತೆ, ಜವಾಬ್ದಾರಿ ಹಂಚಿಕೆ ಕುರಿತು ಸಮಾಲೋಚನೆ ನಡೆಯಿತು. ಸಚಿವರಿಗೆ ವಲಯವಾರು ಜವಾಬ್ದಾರಿ ಹಂಚಿಕೆ, ಶಾಸಕರಿಗೆ ವಾರ್ಡ್ಗಳ ಜವಾಬ್ದಾರಿ ಹಂಚಿಕೆ ಕುರಿತು ಚರ್ಚಿಸಲಾಯಿತು.
ಪಕ್ಷದ ಗೆಲುವಿಗಾಗಿ ಕೆಲಸ: ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಅಶೋಕ್, ಬಿಬಿಎಂಪಿ ಗೆಲುವಿನ ಕಾರ್ಯತಂತ್ರ ಕುರಿತು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸೂಚನೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಶಿರಸಾವಹಿಸಿ ಪಾಲಿಸಲಿದ್ದೇವೆ. ಕಾಂಗ್ರೆಸ್‍ನಲ್ಲಿ ಇರುವಂತೆ ಸಿಎಂ ಹುದ್ದೆ ವಿಚಾರ, ಇತರ ವಿಚಾರಗಳಲ್ಲಿ ನಮ್ಮಲ್ಲಿ ಭಿನ್ನಮತ ಇಲ್ಲ. ನಾವೆಲ್ಲರೂ ಸಾಮೂಹಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು.
ಬೆಂಗಳೂರಿನ ನಮ್ಮೆಲ್ಲ ಶಾಸಕರು, ಎಲ್ಲ ಪದಾಧಿಕಾರಿಗಳು ಎರಡು ಗಂಟೆಗಳ ಕಾಲ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕೋರ್ಟ್ ನಿರ್ದೇಶನವೂ ಬಂದಿದೆ. ಮೀಸಲಾತಿ ಪ್ರಕಟಿಸಿ, ಮತದಾರರ ಪಟ್ಟಿ ಅಂತಿಮಗೊಳಿಸುವುದು ಇತ್ಯಾದಿ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗೆ ಪಕ್ಷದ ತಯಾರಿ ಸಂಬಂಧ ಸಭೆ ನಡೆಸಲಾಗಿದೆ.
ಅರ್ಹ ಮತದಾರರ ಸೇರ್ಪಡೆ ನಡೆಯಲಿದೆ. ಈ ವಾರದಲ್ಲೇ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು. ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರಕ್ರಿಯೆಗಳು ನಡೆಯಲಿವೆ. ಬಿಜೆಪಿ ಪರವಾಗಿ ವಾತಾವರಣ ಇರುವಂತೆ ಮಾಡಲು ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳು ನೀಡಿದ ಸುಮಾರು 8 ಸಾವಿರ ಕೋಟಿ ರೂಪಾಯಿ ಅನುದಾನದ ಕೆಲಸಗಳು ಕೂಡಲೇ ಆರಂಭಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಪ್ರತಿ ಶಾಸಕರು ಹಾಗೂ ನಮ್ಮ ಶಾಸಕರು ಇಲ್ಲದ ಪ್ರದೇಶದಲ್ಲಿ ಸಂಸದರು- ಎಂಎಲ್‍ಸಿಗಳಿಗೆ ಜವಾಬ್ದಾರಿ ಕೊಡಲಾಗುವುದು. ಇಂದಿನ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರು, ಅಧ್ಯಕ್ಷರು ಮಾತನಾಡಿದ್ದು, ಗೆಲುವಿನ ಏಕೈಕ ಗುರಿಯನ್ನು ವ್ಯಕ್ತಪಡಿಸಿದ್ದಾಗಿ ತಿಳಿಸಿದರು.
ಹೊಸ ಪಕ್ಷ ಎದುರಿಸಲು ಸಿದ್ಧತೆ: ಆಪ್, ಎಸ್‍ಡಿಪಿಐ, ಕೆಎಫ್‍ಡಿ, ಕೆಆರ್ಎಸ್ ಪಕ್ಷಗಳನ್ನು ಎದುರಿಸುವ ಬಗ್ಗೆ ಹಾಗೂ ಬಿಜೆಪಿ ಗೆದ್ದು ಅಧಿಕಾರ ಪಡೆಯುವ ಕುರಿತಂತೆ ಚರ್ಚೆ ನಡೆದಿದೆ. ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಧರಿಸಲಿದ್ದಾರೆ. ಚುನಾವಣೆ ಎಂಬುದು ಒಂದು ಯುದ್ಧದಂತೆ. ಆ ಯುದ್ಧ ಗೆಲ್ಲಲು ಚುನಾವಣೆ ಪ್ರಕಟವಾದ ಕೂಡಲೇ ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ : ಸಿ. ಟಿ ರವಿ
ನಮ್ಮದೇ ಸರಕಾರ- ನಮ್ಮ ಮುಖ್ಯಮಂತ್ರಿ, ನಮ್ಮದೇ ಆದ ಬದ್ಧತೆಯ ಕೇಡರ್ ಇರುವುದು ನಮಗೆ ಪ್ಲಸ್ ಪಾಯಿಂಟ್. ಈ ಥರದ ಕೇಡರ್ ಬೇರೆ ಯಾವ ಪಕ್ಷಕ್ಕೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಆಮ್ ಆದ್ಮಿ ಪಕ್ಷ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ದಕ್ಷಿಣ ಭಾರತದಲ್ಲಿ ಒಂದೇ ಒಂದು ಪಾಲಿಕೆ ಸೀಟನ್ನೂ ಗೆಲ್ಲಲಾಗದು ಎಂದು ತಿಳಿಸಿದರು.
ಪಿಎಫ್ಐ ಸಂಘಟನೆ ನಿಷೇಧ: ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ಸಿಎಂ ಜೊತೆ ಮಾತನಾಡುವುದಾಗಿ ತಿಳಿಸಿದರು. ಇದರ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿದೆ. ಕೇಂದ್ರ ಸರಕಾರವು ತೀರ್ಮಾನ ಕೈಗೊಳ್ಳಲಿದೆ ಎಂದರು.