ಬೆಂಗಳೂರು: ಇನ್ನೊಂದು ವಾರದಲ್ಲಿ ಮುಜರಾಯಿ ಇಲಾಖೆ ನಿಯೋಗ ತಿರುಪತಿಗೆ ಭೇಟಿ ನೀಡಿ ಕರ್ನಾಟಕ ಯಾತ್ರಿ ನಿವಾಸದ ಸ್ಥಿತಿಗತಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರವ ಬಿಜೆಪಿ ಕಚೇರಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಎ.ಹೆಚ್. ಆನಂದ್ ನೇತೃತ್ವದ ನಿಯೋಗ ತಿರುಪತಿಯಲ್ಲಿರುವ ಕರ್ನಾಟಕ ಯಾತ್ರಿ ನಿವಾಸದ ಸಮಸ್ಯೆಗಳನ್ನು ಪರಿಹರಿಸುವಂತೆ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿತು.
ತಿರುಪತಿಯಲ್ಲಿ ಕರ್ನಾಟಕದ ಯಾತ್ರಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರ ನೀಡುವ ಜೊತೆಗೆ ಕನ್ನಡಿಗರಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ ಕರ್ನಾಟಕ ಯಾತ್ರಿ ನಿವಾಸದ ನಿರ್ವಹಣೆ ಸರಿಯಿಲ್ಲ. ಅಲ್ಲಿನ ಕ್ಯಾಂಟೀನ್ ಸರಿಯಿಲ್ಲ ಕರ್ನಾಟಕದ ಸಿಬ್ಬಂದಿ ಇಲ್ಲದ ಕಾರಣ ನಮಗೆ ಸಮಸ್ಯೆ ಆಗುತ್ತಿದೆ. ನಮ್ಮ ಸಿಬ್ಬಂದಿ ಅಲ್ಲಿ ಇರಬೇಕು. ಈ ಬಗ್ಗೆ ಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿದರು.
ಮನವಿ ಆಲಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಇನ್ನೊಂದು ವಾರದಲ್ಲಿ ಮುಜರಾಯಿ ಇಲಾಖೆ ನಿಯೋಗ ತಿರುಪತಿಗೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.