ಬೆಂಗಳೂರು: ಹರಿಯಾಣ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಯಲು ಮಹಿಳಾ ಶಾಸಕಿಯರನ್ನು ಬಳಸಿಕೊಂಡಿರುವುದು ಖಂಡನಾರ್ಹ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ತಿಳಿಸಿದ್ದಾರೆ.
ಪ್ರತಿಭಟನೆಯ ವೇಳೆ ಶಾಸಕಿಯರನ್ನು ಟ್ರ್ಯಾಕ್ಟರ್ ಹಗ್ಗ ಎಳೆಯಲು ಬಳಸಿಕೊಂಡು "ಜೀತ ಪದ್ಧತಿ"ಯನ್ನು ನೆನಪು ಮಾಡಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ರೀತಿಯ ವರ್ತನೆ ತೋರಿದ ಹೂಡಾ ಅವರು, ಕಾಂಗ್ರೆಸ್ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ಟೀಕಿಸಿದರು.
ಗೌರವಯುತ ಪ್ರತಿಭಟನೆ ಮಾಡುವುದೇ ಅವರ ಉದ್ದೇಶವಾಗಿದ್ದರೆ ಹೂಡಾ ಮತ್ತು ಇತರ ನಾಯಕರು ಶಾಸಕಿಯರನ್ನು ಟ್ರ್ಯಾಕ್ಟರ್ನಲ್ಲಿ ಕುಳ್ಳಿರಿಸಿ ತಾವು ಹಗ್ಗದಿಂದ ವಾಹನ ಎಳೆಯಬೇಕಿತ್ತು. ಆದರೆ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದರು.
ಇದನ್ನೂ ಓದಿ: ದೇಶದಲ್ಲಿ 2.43 ಕೋಟಿ ಜನರಿಗೆ ವ್ಯಾಕ್ಸಿನ್: ಮಹಾರಾಷ್ಟ್ರ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಂದ್ರ
ಪುರುಷರು ಮತ್ತು ಮಹಿಳೆಯರ ನಡುವಿನ ಅನುಪಾತ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ "ಬೇಟಿ ಬಚಾವೊ, ಬೇಟಿ ಪಡಾವೊ" ಕಾರ್ಯಕ್ರಮಕ್ಕೆ ಹರಿಯಾಣ ರಾಜ್ಯದಿಂದ ಚಾಲನೆ ನೀಡಿದ್ದರು. ಅದೇ ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಕೆಟ್ಟ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಖಂಡನೀಯ ಎಂದು ಗೀತಾ ವಿವೇಕಾನಂದ ಆಕ್ರೋಶ ವ್ಯಕ್ತಪಡಿಸಿದರು.