ಬೆಂಗಳೂರು: ಜಿಂದಾಲ್ ಭ್ರಷ್ಟಾಚಾರ ಪ್ರಕರಣದ ಮೂಲಕ ರಾಜ್ಯದ ಜಮೀನು ಲೂಟಿ ಮಾಡಲು ಮೈತ್ರಿ ಸರ್ಕಾರ ಮುಂದಾಗಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ಗಾಗಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಜಿಂದಗಿಯನ್ನೇ ಹಾಳು ಮಾಡಿಕೊಳ್ಳಲು ಹೊರಟಿದ್ದಾರೆ. ರಾಜ್ಯದ ಜನರಿಗೆ ಉದ್ಯೋಗ ನೀಡುವುದಾಗಿ ಗಣಿ ಹೆಸರಿನಲ್ಲಿ ಜಿಂದಾಲ್ ಕಂಪನಿ ಸರ್ಕಾರಿ ಭೂಮಿ ಬಳಕೆಗೆ ಅನುಮತಿ ಪಡೆದುಕೊಂಡಿತ್ತು. ಆದರೆ, ಸಿಮೆಂಟ್, ಪೇಂಟ್, ಡಾಂಬರ್ ಕಂಪನಿ ಸ್ಥಾಪನೆಗಾಗಿ ಮುಂದಾಗಿದೆ ಎಂದು ಹೇಳಿದರು.
ಹಣಕಾಸಿನ ತೊಂದರೆಯಿಂದಾಗಿ ಸರ್ಕಾರ ಐಸಿಯುನಲ್ಲಿದೆ. ಹೀಗಾಗಿ ಡೈರಕ್ಟಾಗಿ ಒಂದೇ ಡೀಲ್ ಮಾಡಿಬಿಡೋಣ ಅಂತ ಹೊರಟ್ಟಿದ್ದಾರೆ. ಈ ಬಗ್ಗೆ ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಹೆಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೆಚ್.ವಿಶ್ವನಾಥ್ ಕೂಡಾ ಸರ್ಕಾರದ ನಿರ್ಣಯದ ಬಗ್ಗೆ ಆಕ್ಷೇಪಿಸಿದ್ದಾರೆ. ಸರ್ಕಾರದ ಸೂಪರ್ ಮ್ಯಾನ್ ಸಿದ್ದರಾಮಯ್ಯ ಕೂಡಾ ಬಾಯಿ ಬಿಡ್ತಿಲ್ಲ ಎಂದರು.
ಸಿದ್ದರಾಮಯ್ಯ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ರಾಜ್ಯದ ಗಣಿ ಸಂಪತ್ತು ರಕ್ಷಣೆ ಮಾಡಿದ್ರು. ಜಿಂದಾಲ್ ಪ್ರಕರಣದಲ್ಲಿ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರೆ ಬಿಜೆಪಿ ಬೆಂಬಲ ನೀಡಿ ಪಾದಯಾತ್ರೆಗೆ ಸಾಥ್ ನೀಡಲಿದೆ ಎಂದು ತಿಳಿಸಿದರು.
ಇಬ್ಬರು ಸಂಪಾದಕರಿಗೆ ಹುಶಾರ್ ಅಂತ ಸಿಎಂ ಹೇಳಿದ್ದಾರೆ. ಇದು ಇವರು ಎಲ್ಲಿಗೆ ಬಂದ್ರು ಅಂತಾ ತೋರಿಸುತ್ತದೆ. ಮಾಧ್ಯಮಗಳನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಸಿಎಂ ಕುಮಾರಸ್ವಾಮಿ ಅವರಿಂದ ಆಗುತ್ತಿದೆ. ಮಾಧ್ಯಮಗಳನ್ನ ಸಾರ್ವಜನಿಕ ಸಭೆಗಳಲ್ಲಿ ಟೀಕೆ ಮಾಡೋದನ್ನ ಕೈ ಬಿಡಬೇಕು. ಮಾಧ್ಯಮದವರ ಪರವಾಗಿ ದೇವೇಗೌಡರು ಹೋರಾಟ ಮಾಡಿದ್ದರು. ಇಂತಂಹ ಕುಟುಂಬದಿಂದ ಬಂದವರು ಈ ರೀತಿ ಮಾಧ್ಯಮದವರ ಬಗ್ಗೆ ತಳೆದಿರುವ ಧೋರಣೆ ಸರಿಯಲ್ಲ ಎಂದು ತಿವಿದರು.