ಬೆಂಗಳೂರು: ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಕೇಂದ್ರ ಮತ್ತು ರಾಜ್ಯದಲ್ಲಿನ ಡಬಲ್ ಇಂಜಿನ್ ಸರ್ಕಾರ ನೀಡಿರುವುದರಿಂದ ಜನರು ಬಿಜೆಪಿ ಪರ ನಿಂತಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ಬಿಜೆಪಿಗೆ ಈ ಬಾರಿ ಬಹುಮತ ಬರಲಿದೆ ಎಂದು ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ, ಡಿಜಿಟಲ್ ವ್ಯವಸ್ಥೆ ಜಾರಿ: ನಗರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲಾಗುತ್ತಿದೆ. ಡಿಜಿಟಲ್ ವ್ಯವಸ್ಥೆ, ಕೃತಕ ಬುದ್ಧಿಮತ್ತೆ, ಆವಿಷ್ಕಾರ ವಲಯಗಳು ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿವೆ.
ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಭೂಕಂದಾಯ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಕೈಗಾರಿಕೆಗಳಲ್ಲಿ ಕಾನೂನಿನಂತೆ ಜಮೀನು ಖರೀದಿಸಬಹುದಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಪ್ರತಿಭೆ ಮತ್ತು ಕೌಶಲ್ಯಾಭಿವೃದ್ಧಿ ನೀತಿಯ ಪ್ರಮುಖ ಅಂಶಗಳಾಗಿವೆ ಎಂದು ಅವರು ವಿವರಿಸಿದರು.
ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ: ಕರ್ನಾಟಕವನ್ನು ಜ್ಞಾನಾಧಾರಿತ ಮತ್ತು ಆವಿಷ್ಕಾರದ ರಾಜ್ಯವನ್ನಾಗಿಸಲು ಡಬಲ್ ಇಂಜಿನ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲಾಗಿದ್ದು, ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇಡೀ ದೇಶದಲ್ಲೇ ಕರ್ನಾಟಕಕ್ಕೆ ಅಧಿಕ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಬಿಬಿಎಂಪಿ ಕಾಯ್ದೆ : ಬೆಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ಇನ್ನೂ 735 ಎಂಎಲ್ಡಿ ನೀರು ಪೂರೈಕೆ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ನಗರದ ಅಭಿವೃದ್ಧಿಗೆ ಬಿಬಿಎಂಪಿ ಕಾಯ್ದೆ ಜಾರಿಗೆ ತಂದಿದೆ. ಮೆಟ್ರೋ ರೈಲು ಜಾಲ ವಿಸ್ತರಣೆ, ವರ್ತುಲ ರಸ್ತೆಗಳ ನಿರ್ಮಾಣ ಎಲ್ಲ ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ 75 ಹೊಸಮುಖಗಳಿಗೆ ಅವಕಾಶ: ಸಮಾಜಮುಖಿ, ಜನಪರ ಮತ್ತು ಅಭಿವೃದ್ಧಿಯ ಧ್ಯೇಯೋದ್ದೇಶಗಳೊಂದಿಗೆ ಬಿಜೆಪಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಸಾಮಾನ್ಯರಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಈ ಬಿಜೆಪಿಯಲ್ಲಿ ಅವಕಾಶ ನೀಡಲಾಗಿದೆ.
75 ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ಮಹಾ ಸಂಪರ್ಕ ಅಭಿಯಾನ ಇಂದು ಯಶಸ್ವಿಯಾಗಿ ಆರಂಭವಾಗಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮನೆ-ಮನೆಗೆ ಭೇಟಿ ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸುತ್ತಿದ್ದಾರೆ. ಈ ಬಾರಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು, ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುವುದು ನಿಶ್ಚಿತ ಎಂದು ಹೇಳಿದರು.
ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಯು.ಡಿ. ಶರ್ಮಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅನ್ವರ್ಥನಾಮವಾಗಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಹೇಳಿದರು.