ಬೆಂಗಳೂರು: ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ. ಬಿಜೆಪಿ 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರಿಗೂ ಈ ಬಗ್ಗೆ ಸಂದೇಹ ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲಿರುಳೆನ್ನದೆ ಅವರು ಕೆಲಸ ಮಾಡ್ತಿದ್ದಾರೆ. ಅಂತಹ ಕೆಲಸವನ್ನು ರಾಜ್ಯದಲ್ಲಿ ಮಾಡಿದ್ರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಇಂದು ಸ್ವಾತಂತ್ರ್ಯಗಳಿಸಿಕೊಟ್ಟ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುವ ದಿನ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಎಷ್ಟು ಕಿರುಕುಳ ಕೊಟ್ಟಿದೆ ಅನ್ನೋದನ್ನು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇನೆ. ಅವರು ಈಗಾಗಲೇ ಅಧಿಕಾರಕ್ಕೆ ಬಂದೆವು ಅನ್ನೋ ಭ್ರಮೆಯಲ್ಲಿದ್ದಾರೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಓಡಾಟ ಮಾಡಿದರೆ ಕಾಂಗ್ರೆಸ್ಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಬಿಜೆಪಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಂದು ಕಾಲದಲ್ಲಿ ಕಾಶ್ಮೀರ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಲು ಅವಕಾಶ ಇರಲಿಲ್ಲ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ದೇಶದೆಲ್ಲೆಡೆ ತಿರಂಗಾ ಹಾರಿಸುವಂತೆ ಮಾಡಿದ್ದಾರೆ. ಇಡೀ ಜಗತ್ತು ಇಂದು ಭಾರತವನ್ನು ನೋಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರು ಫೋಟೋ ಇಲ್ಲ ಎನ್ನುವ ಚಿಂತೆ : ಸಿಎಂ ವ್ಯಂಗ್ಯ
ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಸ್ವಾತಂತ್ರ್ಯ ಬಂದು 25, 50ನೇ ವರ್ಷವನ್ನು ಹೇಗೆ ಆಚರಣೆ ಮಾಡಿದ್ರು ಎಂದು ನಮಗೆ ಗೊತ್ತಿಲ್ಲ. ಆದರೆ 75 ವರ್ಷವನ್ನು ನರೇಂದ್ರ ಮೋದಿಯವರು ಇಡೀ ರಾಷ್ಟ್ರ ನೋಡುವಂತೆ ಮಾಡಿದರು ಎಂದು ಕೊಂಡಾಡಿದರು.