ಬೆಂಗಳೂರು: ಪ್ರತಿ ಬಾರಿಯಂತೆ ಎಡವದೆ ಅತ್ಯಂತ ನಿಖರವಾಗಿ ಆಪರೇಷನ್ ಮಾಡಲು ಮುಂದಾಗಿರುವ ಬಿಜೆಪಿ, ಈ ಬಾರಿ ಕೇವಲ ಮೂವರಿಗೆ ಮಾತ್ರ ಅಧಿಕಾರ ಕೊಟ್ಟು ಆಪರೇಷನ್ ಕಮಲಕ್ಕೆ ಇಳಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೇಂದ್ರ ಬಿಜೆಪಿ ನಾಯಕರು ಆಪರೇಷನ್ಗೆ ಸೂತ್ರ ಹೆಣೆದಿದ್ದು, ಒಟ್ಟು 22ಕ್ಕೂ ಹೆಚ್ಚು ಶಾಸಕರನ್ನು ಪಡೆಯುವ ಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಕೇಂದ್ರ ಬಿಜೆಪಿ ನಾಯಕರು, ರಾಜ್ಯದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಎಸ್ವೈ ಆಪ್ತ ಸಹಾಯಕ ಸಂತೋಷ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಮಾತ್ರ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಅದಲ್ಲದೆ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಯಾವ ಶಾಸಕರಿಗೆ ಗಾಳ ಹಾಕಿದ್ದೇವೆ ಎಂಬುದನ್ನು ರಾಜ್ಯ ಬಿಜೆಪಿ ನಾಯಕರಿಗೂ ತಿಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು ಎನ್ನಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇಂದು ಬೆಳಿಗ್ಗೆ ಅತೃಪ್ತ ಶಾಸಕರ ರಾಜೀನಾಮೆಗೆ ಮುನ್ನ ಯುಬಿ ಸಿಟಿಯಲ್ಲಿ ಸೇರಿದ ಸಂದರ್ಭ ಅವರೊಂದಿಗೆ ಸಂತೋಷ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇನ್ನೊಂದೆಡೆ ರಾಜಭವನಕ್ಕೆ ಶಾಸಕರು ಆಗಮಿಸುವ ಮುನ್ನ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ರಾಜಭವನದ ಆಚೆಗೆ ಕಾಣಿಸಿಕೊಂಡು ಅಚ್ಚರಿಗೆ ಕಾರಣರಾಗಿದ್ದರು.
ಆದರೆ, ಅರವಿಂದ ಲಿಂಬಾವಳಿ ಮಾತ್ರ ಯಾವುದೇ ರೀತಿಯಲ್ಲೂ ಎದುರಿಗೆ ಕಾಣಿಸಿಕೊಳ್ಳದೆ ಹಿನ್ನೆಲೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಕಳೆದ ನಾಲ್ಕೈದು ಬಾರಿಯಂತೆ ಈ ಸಲವೂ ಆಪರೇಷನ್ ವಿಫಲವಾದಂತೆ ನೋಡಿಕೊಳ್ಳುವಲ್ಲಿ ಕೇಂದ್ರ ಬಿಜೆಪಿ ನಾಯಕರು ಮುಖ್ಯ ಪಾತ್ರ ನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಶಾಸಕರು ಸಾಲು ಸಾಲಾಗಿ ರಾಜೀನಾಮೆ ನೀಡಿ ಇದೀಗ ಬೇರೆ ರಾಜ್ಯದತ್ತ ಪ್ರಯಾಣ ಬೆಳೆಸಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಶಾಸಕರ ರಾಜೀನಾಮೆ ಬಳಿಕ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ.