ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಸಂದೇಶವನ್ನು ರಾಜ್ಯಾದ್ಯಂತ ಜನತೆಗೆ ತಲುಪಿಸಲು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ.
ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಹಮ್ಮಿಕೊಂಡಿದ್ದ 'ಒಂದು ದೇಶ-ಒಂದು ಸಂವಿಧಾನ' ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾರತಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು.
ಕಾರ್ಯಾಗಾರದ ನಂತರ ಬೆಂಗಳೂರು ನಗರ ಜಿಲ್ಲಾ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಡಿ.ಕೆ ಶಿವಕುಮಾರ್ ಬಂಧನ ನಂತರ ನಡೆದ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ಡಿಕೆಶಿ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಒಕ್ಕಲಿಗ ಸಮುದಾಯದ ಮತದಾರರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ ಎನ್ನುವ ಆತಂಕ ವ್ಯಕ್ತವಾಯಿತು.
ನಂತರ ಈ ವಿಚಾರದಲ್ಲಿ ಬಿಜೆಪಿ ಪ್ರತಿಕ್ರಿಯೆ ನೀಡಬೇಕು, ಡಿಕೆ ಶಿವಕುಮಾರ್ ಬಂಧನಕ್ಕೂ ರಾಜ್ಯ ಬಿಜೆಪಿಗೂ ಸಂಬಂಧವಿಲ್ಲ, ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನುವ ಸಂದೇಶ ಜನರಿಗೆ ತಲುಪಿಸಬೇಕು, ಪ್ರತಿಭಟನೆ ನಡೆಯುತ್ತಿರುವ ಕಡೆ ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧ್ಯಕ್ಷರು, ವಕ್ತಾರರು ಸುದ್ದಿಗೋಷ್ಟಿ ನಡೆಸಿ ಈ ಸಂಬಂಧ ವಿವರಣೆ ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲಾಯಿತು. ಎಲ್ಲಾ ಜಿಲ್ಲಾ ಸಮಿತಿಗಳಿಗೂ ಈ ಸಂದೇಶ ರವಾನಿಸಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆಗೊಳಿಸಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ ತೆಂಗಿನಕಾಯಿ, ಜನಸಂಪರ್ಕ ಅಭಿಯಾನದ ರಾಜ್ಯ ಪ್ರಮುಖ ಹಾಗೂ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.