ಬೆಂಗಳೂರು: ನಾನು ಸಿಎಂ ಆಗಿದ್ದಾಗ ಹಾಸ್ಟೆಲ್ಗಳ ಸಂಖ್ಯೆ ಹೆಚ್ಚು ಮಾಡಿದ್ದು ಮಾತ್ರವಲ್ಲದೇ, ಹಾಸ್ಟೆಲ್ ಸಿಗದೇ ಇರುವವರಿಗೆ ಸಹಾಯವಾಗಲು ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದ್ದೆ. ಅದರ ಮೂಲಕ ವಿದ್ಯಾರ್ಥಿಗಳಿಗೆ ಒಂದೂವರೆ ಸಾವಿರ ರೂಪಾಯಿ ಧನಸಹಾಯ ನೀಡುತ್ತಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಲಿಸಿಬಿಟ್ಟದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮತ್ತಿತರರು ಭಾಗವಹಿಸಿದ್ದರು.

ನಾನು ಓದುವಾಗ ಮನೆಯಲ್ಲಿ ಮಹಾರಾಜ ಹಾಸ್ಟೆಲ್ಗೆ ಸೇರಿಕೊಳ್ಳುತ್ತೇನೆ ಎಂದಾಗ ಅಪ್ಪ ಬೇಡ ಅಷ್ಟು ದುಡ್ಡು ಕೊಡಲು ಆಗಲ್ಲ ಅಂದಿದ್ದರು. ರೂಂ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಎರಡು ಹೊತ್ತು ಅಡುಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ಹೋಟೆಲ್ನಲ್ಲಿ ತಿಂಗಳಿಗೆ ಎರಡು ಹೊತ್ತು ಊಟ ಹಾಕಲು 32 ರೂ ಕೊಡಬೇಕಿತ್ತು. ಆ ಕಷ್ಟ ಅರಿತ ನಾನು ವಿದ್ಯಾಸಿರಿ ಜಾರಿಗೆ ತಂದಿದ್ದೆ ಎಂದು ಹೇಳಿದರು.
ನಾನು ಸಿಎಂ ಆಗಲು ಅಂಬೇಡ್ಕರ್ ಸಂವಿಧಾನ ಕಾರಣ. ಮೋದಿ ಪ್ರಧಾನಿ ಆಗಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ. ಎಲ್ಲರೂ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಆದರೆ, ಅಂಬೇಡ್ಕರ್ ದಾರಿಯಲ್ಲಿ ನಡೆಯಯಲು ಸಾಧ್ಯವಿದೆ. ನಾನು ಸಿಎಂ ಆಗಿದ್ದಾಗ ಯಾವ ಅಧಿಕಾರಿಗೂ ಕಾನೂನು ಬಾಹಿರ ಕೆಲಸ ಮಾಡಲು ಹೇಳಿಲ್ಲ. ನಾನು ಕೂಡ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಎಲ್ಲರೂ ಅಂಬೇಡ್ಕರ್ ಬಗ್ಗೆ ಓದಬೇಕು ಎಂದು ಸಲಹೆ ನೀಡಿದರು.
ಸಿಎಂ ಆಶಯ ವ್ಯಕ್ತಪಡಿಸಿದ ಸಿದ್ದರಾಮಯ್ಯ: ನನ್ನನ್ನು ಸಿದ್ದರಾಮಯ್ಯ ಎಂದು ಸಪೋರ್ಟ್ ಮಾಡಬೇಡಿ. ನಾನು ಸಮರ್ಥನಾಗಿದ್ದೇನೋ ಇಲ್ವಾ ಎಂದು ನೋಡಿ ಸಪೋರ್ಟ್ ಮಾಡಿ ಎಂದು ಪರೋಕ್ಷವಾಗಿ ಸಿಎಂ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ ತಾವು ಮುಂದಿನ ಸಿಎಂ ಎಂಬ ಬೆಂಬಲಿಗರ ಕೂಗಿಗೆ ಬೆಂಬಲ ವ್ಯಕ್ತಪಡಿಸಿದರು.
ಎರಡನೇ ಬಾರಿ ಸಿಎಂ ಆಗಬೇಕಾದರೆ ನಾನು ಮೇಲ್ಜಾತಿ ವಿರೋಧಿ ಎಂದು ಪ್ರಚಾರ ಮಾಡಿದ್ದರು. ಅಲ್ಲದೇ ನಾನು ಯಾರ ಪರವಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇನೋ ಅವರ ಬೆಂಬಲವೂ ಸರಿಯಾಗಿ ಸಿಗಲಿಲ್ಲ. ನಾನು ಯಾವ ಜಾತಿ ವಿರೋಧಿಯೂ ಅಲ್ಲ. ಮನುಷ್ಯರ ಪರವಾಗಿ ಇರುವವನು ಎಂದು ಮಾರ್ಮಿಕವಾಗಿ ನುಡಿದರು.
ಎಲ್ಲರನ್ನೂ ಸಮಾನವಾಗಿ ನೋಡಿದ್ದೆ: ನಾನು ಸಿಎಂ ಆಗಿದ್ದಾಗ ಎಲ್ಲ ವರ್ಗವನ್ನು ಸಮಾನವಾಗಿ ನೋಡಿದ್ದೆ. ನಾನು ಇಲ್ಲದೇ ಇದ್ದರೆ ಕುರುಬ ಸಂಘ ಉಳಿಯುತ್ತಿರಲಿಲ್ಲ. ಯಾರೋ ಮಾರಿಕೊಂಡು ತಿಂದು ಬಿಡುತ್ತಿದ್ದರು. ನನಗೆ ಕೊಲೆ ಬೆದರಿಕೆ ಕೂಡ ಹಾಕಿದ್ದರು. ಕನಕ ಗುರು ಪೀಠ ಮಾಡಿದ್ದು ನಾನು. ಈಶ್ವರಪ್ಪ ಮೊದಲ ಸಭೆಗೆ ಬಂದ, ಆಗ ಜನ ಪೀಠ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದು ಕೇಳದರು. ಎರಡನೇ ಸಭೆಗೆ ಬರಲೇ ಇಲ್ಲ ಆ ಗಿರಾಕಿ. ಆದರೆ ಅವ ನಮ್ಮವ ಎಂದು ಜೈಕಾರ ಹಾಕುತ್ತೀರಿ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ನಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಎಲ್ಲಿ ಅವಕಾಶ ಸಿಗುತ್ತೆ ಅಲ್ಲಿ ಹೋಗಿ ಚುನಾವಣೆಗೆ ನಿಲ್ಲುತ್ತಾರೆ. ನಮ್ಮವರು ಎಂದು ವೋಟ್ ಹಾಕಿ ಬಿಡ್ತೀರಿ. ಅನಂತ್ ಕುಮಾರ ಅಂತ ಒಬ್ಬ ಸಚಿವ ಇದ್ದ. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲು ಅಂದ. ಇಂತಹವರಿಂದ ನಮಗೆ ರಕ್ಷಣೆ ಸಿಗುತ್ತಾ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿದ ಸಂದರ್ಭ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಇದೆ. ಅವರು ಬಲಿಷ್ಠ ನಾಯಕರು. ಕೂಗುಮಾರಿಗಳು ಬಲಿಷ್ಠರಾದ ಸಿದ್ದರಾಮಯ್ಯ ಮೇಲೆ ಮುಗಿ ಬೀಳುತ್ತಾರೆ. ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಎಲ್ಲಾ ಅವಕಾಶ ಇದೆ ಎಂದರು.
ಇದನ್ನೂ ಓದಿ: ಕನಕ ಜಯಂತಿ ಸಮಾರಂಭ.. ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು