ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ಎರಡೂ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಅಕ್ಟೋಬರ್ 16ರಿಂದ ಸಚಿವರು, ಶಾಸಕರು ಕ್ಷೇತ್ರದಲ್ಲಿಯೇ ಇದ್ದು ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಉಪ ಚುನಾವಣೆ ನಡೆಯುತ್ತಿರುವ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರ ಎರಡರಲ್ಲಿಯೂ ಬಿಜೆಪಿ ಗೆಲುವು ಖಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಉಪ ಚುನಾವಣೆ ಕುರಿತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಸಭೆ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿ ನಿರ್ಗಮಿಸಿದರು.
ಸಿಎಂ ಜತೆಗೆ ಮಾತುಕತೆ ನಡೆಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದರು. ಎರಡು ಉಪಚುನಾವಣೆಗಳ ಬಗ್ಗೆ ನಾನು, ಸಿಎಂ ಚರ್ಚೆ ಮಾಡಿದ್ದೇವೆ. ಪ್ರವಾಸ, ಪ್ರಚಾರ ಬಗ್ಗೆ ಚರ್ಚೆ ಆಗಿದೆ. ಎರಡೂ ಕಡೆ ಗೆಲ್ಲಲು ಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದೇವೆ. ಎರಡೂ ಕಡೆಯೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎರಡು ಕ್ಷೇತ್ರದಲ್ಲೂ ಯಡಿಯೂರಪ್ಪ ಪ್ರವಾಸ ಮಾಡಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕ್ಷೇತ್ರಗಳ ಉಸ್ತುವಾರಿ ಹಂಚಿಕೆ ಮಾಡಿದ್ದು, ಎಲ್ಲ ನಾಯಕರು ಕ್ಷೇತ್ರಕ್ಕೆ ತೆರಳಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅ.16ರ ನಂತರ ಎಲ್ಲರೂ ಕ್ಷೇತ್ರದಲ್ಲಿ ಇದ್ದು ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದರು.
ಐಟಿ ದಾಳಿ ಮೂಲಕ ಯಡಿಯೂರಪ್ಪ ನಿಯಂತ್ರಣ ಎಂಬ ಟೀಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಐಟಿ ದಾಳಿ ಆದಾಗ ರಾಜಕಾರಣ ಅಂತಾ ಆರೋಪ ಮಾಡುತ್ತಾರೆ. ಡಿಕೆಶಿ ಮನೆಗೆ ಐಟಿ ಬಂದಾಗ ಅದು ರಾಜಕಾರಣ. ಈ ಐಟಿ ದಾಳಿಗೂ ಇನ್ನೊಂದು ಬಣ್ಣ ಕೊಡುತ್ತಾರೆ. ಐಟಿ ದಾಳಿಗೆ ಅದ್ರದ್ದೇ ಆದ ಉದ್ದೇಶ ಇರುತ್ತದೆ. ಅದರದ್ದೇ ಆದ ಜವಾಬ್ದಾರಿ ಅಡಿ ಐಟಿ ಕೆಲಸ ಮಾಡುತ್ತದೆ. ಐಟಿಯಲ್ಲಿ ರಾಜಕಾರಣ ಇರಲ್ಲ ಎಂದರು.
ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಪಕ್ಷದಿಂದಲೇ ಅಡ್ಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕರು. ನಮ್ಮ ಸರ್ವ ಶ್ರೇಷ್ಠ ನಾಯಕ ಯಡಿಯೂರಪ್ಪ ಅವರ ಪ್ರವಾಸ ತಡೆ ಹಿಡಿಯುವ ಶಕ್ತಿ ಬಿಜೆಪಿಯಲ್ಲಿ ಯಾರಿಗೂ ಇಲ್ಲ. ಉಪ ಚುನಾವಣೆ ನಂತರ ನವೆಂವರ್‌ನಲ್ಲಿ ಯಡಿಯೂರಪ್ಪ ಪ್ರವಾಸ ಮಾಡಲಿದ್ದಾರೆ. ನಿಗಮ ಮಂಡಳಿ, ಸಂಪುಟ ವಿಸ್ತರಣೆ ಎಲ್ಲವೂ ಉಪ ಚುನಾವಣೆ ಬಳಿಕ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಜಿಲ್ಲಾ ಉಸ್ತುವಾರಿ ಜಟಾಪಟಿ ವಿಚಾರ ಚರ್ಚಿತವಾಗುತ್ತಿದೆ. ಜಿಲ್ಲಾ ಉಸ್ತುವಾರಿಗಳು ಯಾರು ಇರಬೇಕು, ಎಲ್ಲಿಗೆ ಇರಬೇಕು ಅಂತಾ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಕಟೀಲ್ ಸ್ಪಷ್ಟಪಡಿಸಿದರು.