ಬೆಂಗಳೂರು : ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಸೇರಿ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಬಿಎಸ್ವೈ, ಪಕ್ಷವನ್ನು ನಿರಂತರವಾಗಿ ಸಂಘಟನೆ ಮಾಡಬೇಕು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಶ್ರಮ ವಹಿಸಬೇಕು. 100 ದಿನಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರವು ಜನಪ್ರಿಯತೆ ಕಳೆದುಕೊಂಡಿದೆ. ಎಲ್ಲ ರಂಗಗಳಲ್ಲೂ ಸರ್ಕಾರ ವಿಫಲವಾಗಿದೆ. ಸಿದ್ದರಾಮಯ್ಯರ ಸರ್ಕಾರದ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ರಾಜ್ಯಾದ್ಯಂತ ಬಿಜೆಪಿ ಪ್ರವಾಸ : ಇದೇ ತಿಂಗಳ 18ರಿಂದ ಕುರುಡುಮಲೆಯಿಂದ ಬಿಜೆಪಿಯ ರಾಜ್ಯಾದ್ಯಂತ ರಾಜಕೀಯ ಪ್ರವಾಸ ಆರಂಭವಾಗಲಿದೆ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮಾಧ್ಯಮಗಳಿಗೆ ತಿಳಿಸಿದರು. ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನವನ್ನು ದುರುಪಯೋಗ ಮಾಡಿಕೊಂಡು ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಭೀಕರ ಬರಗಾಲ ಇದ್ದರೂ ಅದರ ಕಡೆಗೆ ಗಮನ ನೀಡುತ್ತಿಲ್ಲ. ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿದರೆಂದು ತಿಳಿಸಿದರು.
ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಆಗ್ರಹ : ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ಹಿಂದುತ್ವದ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ. ಈ ಸಂಬಂಧ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಯಿತು ಎಂದು ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಾತನಾಡಿ, ಪಕ್ಷ ಸಂಘಟನೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಬರಗಾಲ, ಆಡಳಿತದಲ್ಲಿ ವೈಫಲ್ಯ ಸೇರಿದಂತೆ ಕಾಂಗ್ರೆಸ್ ಸರಕಾರದ ಅಸಮರ್ಪಕ ಆಡಳಿತ ವೈಖರಿ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸದ ಪ್ರತಾಪ್ ಸಿಂಹ, ಮುಖಂಡರಾದ ತೇಜಸ್ವಿನಿ ಅನಂತಕುಮಾರ್, ಶಾಸಕರಾದ ಬಿ.ವೈ. ವಿಜಯೇಂದ್ರ, ಮಹೇಶ್ ಟೆಂಗಿನಕಾಯಿ ಮತ್ತಿತರರು ಉಪಸ್ಥಿತರಿದ್ದರು.
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಭಾರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಎರಡೂ ಪಕ್ಷದಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು, ನಾವ್ಯಾರು ರಾಜರುಗಳಲ್ಲ: ಸಿಎಂ ಸಿದ್ದರಾಮಯ್ಯ