ಬೆಂಗಳೂರು: ಕರ್ನಾಟಕ ಜನಸಂವಾದ ವರ್ಚುವಲ್ ರ್‍ಯಾಲಿ ಯಶಸ್ವಿಯಾಗಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ವರ್ಚುವಲ್ ರ್‍ಯಾಲಿಗಳನ್ನು ಆಯೋಜಿಸಿ ಜನರನ್ನು ತಲುಪುವ ತೀರ್ಮಾನವನ್ನು ಪಕ್ಷ ತೆಗೆದುಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.
ಬಿಜೆಪಿ ಕೋರ್ ಕಮಿಟಿ ಸಭೆ ನಂತರ ಮಾತನಾಡಿದ ಅವರು, ಜೂನ್ 14ರಂದು ನಡೆದ ಕರ್ನಾಟಕ ಜನಸಂವಾದ ವರ್ಚುವಲ್ ರ್‍ಯಾಲಿಯಲ್ಲಿ ವಿಶ್ವದ ಎಲ್ಲೆಡೆಯಿಂದ ಸುಮಾರು 2 ಕೋಟಿಗೂ ಅಧಿಕ ಜನ ಭಾಗವಹಿಸಿದ್ದರು. ರಾಜ್ಯದಲ್ಲಿ ಅಂದಾಜು 58.23 ಲಕ್ಷಕ್ಕೂ ಹೆಚ್ಚು ಜನ ವರ್ಚುವಲ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು (ಫೇಸ್‌ಬುಕ್‌ನಲ್ಲಿ 50.50 ಲಕ್ಷ, ಟ್ವಿಟ್ಟರ್‌ನಲ್ಲಿ 21 ಲಕ್ಷ, ದೂರದರ್ಶನದಲ್ಲಿ 7 ಲಕ್ಷ). ಹೋಬಳಿ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳು ಮಾಹಿತಿಯನ್ನು ಒಳಗೊಂಡಿರುವ ಕರಪತ್ರ ವಿತರಣೆ ಮಾಡಿದ್ದಾರೆ ಎಂದು ಹೇಳಿದರು.
ಜೂನ್ 18 ರಂದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೊರೊನಾ ವಿರುದ್ಧ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ. ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆಯ ಕುರಿತು ಅರಿವು ಮೂಡಿಸಲು ಪಕ್ಷ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸಭೆಯಲ್ಲಿ 50 ಜನರಿಗಿಂತ ಹೆಚ್ಚು ಜನ ಸೇರದಂತೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಬೆಂಗಳೂರಿನಲ್ಲಿ ಜನಜಾಗೃತಿ ನಡಿಗೆ ಆಯೋಜಿಸಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ. ಉಳಿದ ಕಡೆಗಳಲ್ಲಿ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗವಹಿಸಬೇಕೆಂದು ತಿಳಿಸಿದರು.
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಪಕ್ಷದ ಪ್ರತಿ ಘಟಕದಲ್ಲೂ 20 ಜನರಿಗಿಂತ ಹೆಚ್ಚು ಸೇರದಂತೆ ಯೋಗಾಸನ ನಡೆಸಿ ಸಾಂಕೇತಿಕವಾಗಿ ಯೋಗ ದಿನ ಆಚರಿಸಬೇಕೆಂದು ತೀರ್ಮಾನಿಸಲಾಗಿದೆ. ಉಳಿದಂತೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯೋಗಾಸನ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡುವಂತೆ ಕೋರ್ ಕಮಿಟಿಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.