ಬೆಂಗಳೂರು: ಶಿರಾ, ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗುತ್ತಿದ್ದಂತೆ, ಸಂಘಟನಾತ್ಮಕ ಚಟುವಟಿಕೆಯತ್ತ ಬಿಜೆಪಿ ಮುಖ ಮಾಡುತ್ತಿದೆ. ಭವಿಷ್ಯದ ಚುನಾವಣೆಗಳನ್ನು ಗುರಿಯಾಗಿಸಿಕೊಂಡು ಪಕ್ಷವನ್ನು ಸಜ್ಜುಗೊಳಿಸುವತ್ತ ಚಿತ್ತ ಹರಿಸಿದೆ.
ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಗಳಿಗೆ ಮತದಾನವಾಗಿದೆ. ಆರ್.ಆರ್. ನಗರ, ಶಿರಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಪಕ್ಷ ಬಲವರ್ಧನೆ ಕುರಿತು ಮಹತ್ವದ ಚರ್ಚೆ ನಡೆಸಲು ನವೆಂಬರ್ 5 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ.
ಮಂಗಳೂರಿನಲ್ಲಿ ನಡೆಯಲಿರುವ ಒಂದು ದಿನದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕಾರಿಣಿ ಸದಸ್ಯರು, ಆಹ್ವಾನಿತರು ಪಾಲ್ಗೊಳ್ಳಲಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕಾರಿಣಿ ಸಭೆ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಪಕ್ಷ ಸಂಘಟನೆ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ, ಬಸವ ಕಲ್ಯಾಣ, ಮಸ್ಕಿ ವಿಧಾನಸಭೆ, ಬೆಳಗಾವಿ ಲೋಕಸಭೆ ಉಪ ಚುನಾವಣೆ ಸೇರಿದಂತೆ ಭವಿಷ್ಯದಲ್ಲಿ ಎದುರಾಗಲಿರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಕಾರ್ಯಕಾರಿಣಿ ಸಭೆ ನಂತರ ಪಕ್ಷದ ಕೋರ್‌ಕಮಿಟಿ ಸಭೆ ನಡೆಸಲಾಗುತ್ತದೆ ಎನ್ನಲಾಗಿದೆ. ಪಕ್ಷದ ಆಂತರಿಕ ಸಮಸ್ಯೆ, ಸರ್ಕಾರ, ಪಕ್ಷದ ನಡುವೆ ಅಂತರ ಇತ್ಯಾದಿಗಳ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.