ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ ಲಕ್ಷ್ಮಣ್, 2018ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರಕ್ಕೆ ಏರಿಕೆ ಆಗಿದೆ ಎಂದು ಹೇಳಿದರು.
2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆ ವ್ಯಾಪ್ತಿಯಲ್ಲಿ 6620 ರೌಡಿಗಳಿದ್ದಾರೆ. ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿಶೀಟರ್‌ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯವರು ಪಟ್ಟಿ ಮಾಡಿದ್ದಾರೆ. 36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ ಹಾಗೂ ನಾಗಮಂಗಲದ ಫೈಟರ್ ರವಿ, ಬೆತ್ತನಗೆರೆ ಶಂಕರ, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ ಎಂದು ಆರೋಪಿಸಿದರು.
ಆರ್ಎಸ್ಎಸ್ ನಿರ್ದೇಶನ: ಬಿಜೆಪಿ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ, ನಮಗೆ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೋಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಗಿದೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದರು.
3 ಕೋಟಿ ಮೌಲ್ಯದ ಬೇನಾಮಿ ಆಸ್ತಿ: ಸಿ.ಟಿ ರವಿ ಅವರು ನಾನು ಒಬ್ಬ ರೌಡಿ ಶೀಟರ್ ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ ರವಿ ಅವರ ಮೇಲೆ 2012ರಲ್ಲಿ ಐಟಿ ರೈಡ್ ಆಗಿತ್ತು. 2004ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ಹಾಗೂ 1.2 ಲಕ್ಷ ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ನಲ್ಲಿ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ ರವಿ ಅವರು ಬೇನಾಮಿ ಹೆಸರಲ್ಲಿ 3 ಸಾವಿರ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ: ಸಿದ್ದರಾಮಯ್ಯ