ಬೆಂಗಳೂರು : ನೀವು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ, ಎಸ್‌ಡಿಪಿಐ ಮೇಲಿನ 175 ಕೇಸುಗಳನ್ನು ಯಾವುದೇ ಷರತ್ತಿಲ್ಲದೆ ಹಿಂದಕ್ಕೆ ಪಡೆದಾಗ ಅವರು ಕರ್ನಾಟಕ ಕಾಂಗ್ರೆಸ್ ಟೀಂ ಆಗಿದ್ದರಾ? ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಬರುತ್ತಿಲ್ಲ ಎಂಬ ಭಯದಲ್ಲಿ ಏನೇನೋ ಮಾತನಾಡುತ್ತಿದ್ದೀರಿ ಅಷ್ಟೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಿಸಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಮುಖ್ಯಮಂತ್ರಿಯಾಗುವ ಕನಸು ವಿಪರೀತವಾಗಿ ಬೀಳುತ್ತಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಸ್ವಕ್ಷೇತ್ರದಲ್ಲಿ ಸೋತಿದ್ದು ಹೇಗೆ? ಗೆಲ್ಲಲಾರದೆ ಮುಖ ಮುಚ್ಚಿಕೊಂಡು ಓಡಾಡುತ್ತಿರುವ ನೀವು ಜನರ ಮನಸ್ಸು ಗೆದ್ದಿದ್ದೇವೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಜನರ ಮನಸ್ಸು ಗೆದ್ದವರು ಸಾಲು-ಸಾಲು ಚುನಾವಣೆಯಲ್ಲಿ ಸೋತಿದ್ದು ಹೇಗೆ? ಉಪಚುನಾವಣೆಯಲ್ಲಿ ಕೆಪಿಸಿಸಿ ಸಾಧನೆ ಶೂನ್ಯ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲೇ ನೆಲಕಚ್ಚಿ ಹೋಗಿದ್ದೀರಿ. ಮುಖ್ಯಮಂತ್ರಿಯಾಗಬೇಕೆನ್ನುವ ದುರಾಸೆಯಿಂದ ಸಿದ್ದರಾಮಯ್ಯ ಸುಳ್ಳಿನ ಮೊರೆ ಹೋಗುತ್ತಿದ್ದೀರಿ ಎಂದು ಆರೋಪಿಸಿದೆ.
ಜನರು ಅಧಿಕಾರ ನೀಡಿದಾಗ ನಿದ್ದೆ ಮಾಡಿದ್ರಿ. 122ರಲ್ಲಿದ್ದ ನೀವು 80ಕ್ಕೆ ಇಳಿದು ಮೈತ್ರಿ ಮಾಡಿಕೊಳ್ಳಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೆದ್ದಿದ್ದು ಕೇವಲ ಒಂದು ಸ್ಥಾನ. ನೀವು ಅಧಿಕಾರಕ್ಕೆ ಬರುವುದು ಬಿಡಿ, ಅದರ ಹತ್ತಿರವೂ ಸುಳಿಯಲಾರಿರಿ ಎಂದು ವ್ಯಂಗ್ಯವಾಡಿದೆ.
ಈ ಸುದ್ದಿಯನ್ನೂ ಓದಿ: ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಕಾಂಗ್ರೆಸ್ ಖಂಡನೆ, ಆಕ್ರೋಶ!
ಜಾಮೀನಿನ ಮೇಲೆ ಓಡಾಡುತ್ತಿರುವವರಿಗೆ ನ್ಯಾಯಾಲಯ ಮತ್ತೆ ನೋಟಿಸ್ ಜಾರಿ ಮಾಡಿದೆ. ಭ್ರಷ್ಟಾಚಾರ ಮಾಡಲೆಂದೇ ಜನ್ಮತಾಳಿದ ಪಕ್ಷವೊಂದಿದ್ದರೆ, ಅದು ಕಾಂಗ್ರೆಸ್ ಮಾತ್ರ. ದೇಶದ ಜನರ ಬಡತನ ನೀಗಿಸುತ್ತೇವೆ ಎಂದು ಅಧಿಕಾರ ಪಡೆದವರು ತಮ್ಮ ಕುಟುಂಬದ ಬಡತನ್ನವನ್ನಷ್ಟೇ ನೀಗಿಸಿಕೊಂಡರು ಎಂದು ಸರಣಿ ಟ್ವೀಟ್ ಮಾಡಿದ ಬಿಜೆಪಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.