ಬೆಂಗಳೂರು: ರಾಜ್ಯ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಹೆಸರು ಇನ್ನೂ ಸಸ್ಪೆನ್ಸ್ ಆಗಿ ಉಳಿದುಕೊಂಡಿದೆ. ನಿನ್ನೆ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕೂಡಾ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.
ಇದರಿಂದ ಆರ್ ಆರ್ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನರ ಆತಂಕ ಇನ್ನಷ್ಟು ಹೆಚ್ಚಿಸಿದೆ. ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲೂ ಮುನಿರತ್ನಗೆ ಟಿಕೆಟ್ ನೀಡುವ ವಿಚಾರದಲ್ಲಿ ಪರ, ವಿರೋಧ ಚರ್ಚೆಯಾಗಿದೆ. ರಾಜ್ಯ ನಾಯಕರು ಹಾಗೂ ಕೆಲ ಹೈಕಮಾಂಡ್ ನಾಯಕರು ಮುನಿರತ್ನಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಸಂಘದ ಹಿರಿಯರು, ಕೆಲವು ಬಿಜೆಪಿ ನಾಯಕರು ಮುನಿರತ್ನಗೆ ಟಿಕೆಟ್ ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಹೆಸರು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಮುನಿರಾಜುಗೌಡ-ಮುನಿರತ್ನ ಇಬ್ಬರಲ್ಲಿ ಯಾರಿಗೆ ಟಿಕೆಟ್ ಅನ್ನೋದೇ ಗೊಂದಲಕ್ಕೆ ಕಾರಣವಾಗಿದೆ. ಮುನಿರತ್ನ ಪರ ಸಿಎಂ ಬಿಎಸ್‌ವೈ ಹಾಗೂ ಹಲವು ಸಚಿವರು ಒತ್ತಡ ಹೇರುತ್ತಿದ್ದರೆ, ಮುನಿರಾಜುಗೌಡ ಪರ ಆರ್ ಎಸ್ಎಸ್ ಹಿರಿಯ ಮುಖಂಡರು ಲಾಬಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಟಿಕೆಟ್ ಘೋಷಣೆಯಲ್ಲಿ ವಿಳಂಬವಾಗಿದೆ.
ಇಂದು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಇತರೆ ರಾಜ್ಯಗಳ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದರೂ, ಕರ್ನಾಟಕದ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲು ಸಾಧ್ಯವಾಗಿಲ್ಲ. ಇಂದು ಬಿಜೆಪಿ ಹೈಕಮಾಂಡ್ ಗುಜರಾತ್, ಒಡಿಶಾ, ಮಣಿಪುರ ಹಾಗೂ ಜಾರ್ಖಂಡ್ ನಲ್ಲಿನ ಉಪಚುನಾವಣೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆದರೆ, ರಾಜ್ಯದ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಿಸದೇ ಇರುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.