ಬೆಂಗಳೂರು : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೂರು ದಿನದಲ್ಲಿ ಇವರ ಸಾಧನೆ ಏನೂ ಇಲ್ಲ. ಬರೀ ವರ್ಗಾವಣೆ ದಂಧೆ. ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಾಗಾಗಿ, ಕೈಕೊಟ್ಟ ಯೋಜನೆ, ಹಳಿ ತಪ್ಪಿದ ಆಡಳಿತ ಹೆಸರಿನಲ್ಲಿ ಸರ್ಕಾರದ ವೈಫಲ್ಯಗಳ ಹೆಸರಿನಲ್ಲಿ ಸರ್ಕಾರದ ತಪ್ಪುಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕೈಕೊಟ್ಟ ಯೋಜನೆ, ಹಳಿ ತಪ್ಪಿದ ಆಡಳಿತ ಹೆಸರಿನಲ್ಲಿ ಸರ್ಕಾರದ ವಿರುದ್ಧ ನೂರು ದಿನಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನವಾಗಿದೆ. ಇಷ್ಟು ದಿನದಲ್ಲಿ ಜನರ ನಂಬಿಕೆಗೆ ದ್ರೋಹ ಮಾಡಿದೆ. ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿಗಳ ಘೋಷಣೆ ಮಾಡಿತ್ತು. ಭ್ರಷ್ಟಾಚಾರದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡಿ, ಈಗ ನೂರಾರು ತಪ್ಪು ಮಾಡಿದೆ. ಗ್ಯಾರಂಟಿಗಳಿಗೆ ಮಾನದಂಡ ಹಾಕಿ ಸರ್ಕಾರ ಮಾತು ತಪ್ಪಿದೆ. ಅವರದೇ ಸರ್ಕಾರದಲ್ಲಿ ಇಬ್ಬರು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದರೂ ರಾಜೀನಾಮೆ ಪಡೆಯಲು ವಿಫಲವಾಗಿದೆ. ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಬಂಡವಾಳ ಅತಿ ಹೆಚ್ಚು ಹರಿದು ಬಂದಿತ್ತು. ಆದರೆ, ಇಂದು ಹೂಡಿಕೆದಾರರು ವಾಪಸ್ ಹೋಗುತ್ತಿದ್ದಾರೆ. ಇದಕ್ಕೆ ವಿದ್ಯುತ್ ಸಮಸ್ಯೆ ಸೇರಿ ಹಲವು ಕಾರಣಗಳಿವೆ. ಉಚಿತ ವಿದ್ಯುತ್ ಎಂದವರು ಈಗ ಅಘೋಷಿತ ವಿದ್ಯುತ್ ಕಡಿತ ಮಾಡಿದ್ದಾರೆ. ರೈತರಿಗೆ ಬರ ಸ್ಥಿತಿ ಇದೆ. ಮಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ರೈತರಿಗೂ ವಿದ್ಯುತ್ ಅಭಾವ ಎದುರಾಗಿದೆ. ಬಜೆಟ್ನಲ್ಲಿ ಯಾವ ರೈತಪರ ಯೋಜನೆ ಘೋಷಿಸಿಲ್ಲ. ಹಿಂದಿನ ಸರ್ಕಾರದಲ್ಲಿ ಕೇಂದ್ರದ 6 ಸಾವಿರ ಜೊತೆ ರಾಜ್ಯ 4 ಸಾವಿರ ಕೊಡುತ್ತಿತ್ತು. ಅದನ್ನು ನಿಲ್ಲಿಸಿದ್ದಾರೆ.
ರೈತ ವಿದ್ಯಾನಿಧಿಗೆ ಕತ್ತರಿ ಹಾಕಿದ್ದಾರೆ. ರೈತ ವಿರೋಧಿ ಸರ್ಕಾರ ಇದು. ಸಿಎಂ ಕಚೇರಿಯಿಂದ ಪಂಚಾಯತ್ವರೆಗೂ ಭ್ರಷ್ಟಾಚಾರ ಆರೋಪ ಇದೆ. ಈ ಸರ್ಕಾರ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ತಡೆಯುವಲ್ಲಿ ವಿಫಲವಾಗಿದೆ. ವಿದ್ಯುತ್ ಪೂರೈಕೆ ವಿಫಲವಾಗಿದೆ. ಹೂಡಿಕೆದಾರರ ಮನವೊಲಿಸಲು ವಿಫಲವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಮಾಡಿದ್ದ ಕಾಯ್ದೆ ವಾಪಸ್ ಪಡೆದಿದ್ದಾರೆ. ನಮ್ಮ ಯೋಜನೆ ನಿಲ್ಲಿಸುವ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಬರಹಕ್ಕೂ ಅಂಕುಶ ಹಾಕುತ್ತಿದ್ದಾರೆ. ಮಾಧ್ಯಮಗಳಿಗೂ ಕಿರುಕುಳ ನೀಡುತ್ತಿದ್ದಾರೆ. ಒಂದು ರೀತಿ ಈ ಸರ್ಕಾರ ಎಮರ್ಜೆನ್ಸಿ ತರುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಜೈನ ಮುನಿ ಹತ್ಯೆಯಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಉಡುಪಿ ಘಟನೆ ಕ್ಷುಲ್ಲಕವಾಗಿ ಪರಿಗಣಿಸಿದೆ. ಸರ್ವಾಧಿಕಾರಿ ಧೋರಣೆ ತಳೆದಿದೆ. ಸಾಮಾಜಿಕ ಜಾಲತಾಣಕ್ಕೆ, ಮಾಧ್ಯಮಕ್ಕೆ ಅಂಕುಶ ಹಾಕಿ, ವಾಕ್ ಸ್ವಾತಂತ್ರ್ಯದ ಧಮನಕ್ಕೆ ಯತ್ನಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ಘೋಷಣೆ ಮಾಡಿ ಈವರೆಗೂ ಜಾರಿಗೆ ತರಲಿಲ್ಲ. ವೇತನ ಕೂಡ ಸರಿಯಾಗಿ ಕೊಡುತ್ತಿಲ್ಲ. ಯಾವುದೇ ಅಭಿವೃದ್ಧಿ ಯೋಜನೆ ಮಾಡಿಲ್ಲ. ಅನುದಾನ ಬಿಡುಗಡೆ ಆಗಿಲ್ಲ. ನಮ್ಮ ಅವಧಿಯ ಯೋಜನೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ, ಕೈಕೊಟ್ಟ ಯೋಜನೆ, ಹಳಿ ತಪ್ಪಿದ ಆಡಳಿತ ಹೆಸರಿನಲ್ಲಿ ಸರ್ಕಾರದ ವೈಫಲ್ಯಗಳ ಕೃತಿ ಬಿಡುಗಡೆ ಮಾಡಿದ್ದು, ಸರ್ಕಾರದ ತಪ್ಪುಗಳನ್ನು ಜನರ ಮುಂದೆ ಇಟ್ಟುಕೊಂಡು ಹೋಗಲಿದ್ದೇವೆ ಎಂದರು.
ನಂತರ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಪೂರ್ಣ ಬಹುಮತ ಪಡೆದ ಸರ್ಕಾರ ಯಾವ ರೀತಿ ಪ್ರಾರಂಭ ಮಾಡಿ ಮುಂದಿನ ಐದು ವರ್ಷದ ದಿಕ್ಸೂಚಿ ಹೇಳಬೇಕಿತ್ತೋ ಅದರ ಬದಲು ದಿಕ್ಕು ತಪ್ಪಿದ ಸರ್ಕಾರವಾಗಿದೆ. ನಾಲ್ಕು ದಿಕ್ಕಿನಲ್ಲೂ ವಿಫಲವಾಗಿದೆ. ಎಲ್ಲದರಲ್ಲೂ ಗೊಂದಲಕ್ಕೆ ಸಿಲುಕಿದೆ. ಜನರಿಗೆ ಕೊಟ್ಟ ಮಾತು ತಪ್ಪಿರುವ ಸರ್ಕಾರ ಇದು. ಹಣಕಾಸಿನ ವ್ಯವಸ್ಥೆ ಹಳಿ ತಪ್ಪಿಸಿದೆ. ಫೆಬ್ರವರಿಯಲ್ಲಿ ಉಳಿತಾಯ ಬಜೆಟ್ ಮಂಡಿಸಿದ್ದೆವು. ಇವರು ಬಂದು 8 ಸಾವಿರ ಕೋಟಿ ಅಧಿಕ ಸಾಲ ಮಾಡಿ 35 ಸಾವಿರ ಕೋಟಿ ಅಧಿಕ ತೆರಿಗೆ ಹಾಕಿದರು. 45 ಸಾವಿರ ಕೋಟಿಗೂ ಹೆಚ್ಚು ಪಡೆಯುವ ಸ್ಥಿತಿಯಲ್ಲೂ 12 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲೂ 14 ಸಾವಿರ ಕೋಟಿ ಕೊರತೆಯನ್ನು ಸರಿದೂಗಿಸಿದ್ದೆವು. ಆದರೆ, ಕೋವಿಡ್ ಇಲ್ಲದ ವೇಳೆಯಲ್ಲೂ ಕೋವಿಡ್ ಸ್ಥಿತಿಗೆ ಹಣಕಾಸು ಸ್ಥಿತಿ ಕೊಂಡೊಯ್ದಿದ್ದಾರೆ. ಇದರ ಪರಿಣಾಮ ಸರ್ಕಾರಿ ನೌಕರರ ವೇತನ ವಿಳಂಬವಾಗುತ್ತಿದೆ. ಸಂಘ ಸಂಸ್ಥೆಗಳಿಗೆ ಪೂರ್ಣ ವೇತನ ಸಿಗುತ್ತಿಲ್ಲ. ಒಂದೇ ಒಂದು ಕಿಲೋಮೀಟರ್ ರಸ್ತೆ ನಿರ್ಮಿಸಿಲ್ಲ. ಬರಗಾಲ ಬಂದ ಸಂದರ್ಭದಲ್ಲಿ ರೈತರ ಕಡೆ ತಿರುಗಿಯೂ ನೋಡಿಲ್ಲ. ರೈತರು ಎರಡು ಬಾರಿ ಭಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಸಕಾಲಕ್ಕೆ ಸಾಲ ಸಿಗುತ್ತಿಲ್ಲ. ಸಾಲದ ಪ್ರಮಾಣ ಹೆಚ್ಚಾಗಿದೆ.
ಕಳೆದ ಎರಡು ತಿಂಗಳಲ್ಲಿ 50 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2013-18 ರವರೆಗೆ 4500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 5 ವರ್ಷ ನಿಂತಿತ್ತು. ಆದರೆ ಈಗ ಮತ್ತೆ ಆತ್ಮಹತ್ಯೆ ಆರಂಭವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರಕ್ಕೆ ಸೂಚಿಸಿದ್ದಾರೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿಲ್ಲ. ದವಸ ಧಾನ್ಯದ ಸುಗ್ಗಿಯ ಬದಲು ವರ್ಗಾವಣೆ ದಂಧೆಯ ಸುಗ್ಗಿ ನಡೆಯುತ್ತಿದೆ. ರೈತ ವಿದ್ಯಾನಿಧಿಯಡಿ 8 ಲಕ್ಷಕ್ಕೂ ಹೆಚ್ಚು ಮಕ್ಕಳು ಲಾಭ ಪಡೆದಿದ್ದಾರೆ. ಆದರೆ ಇವರು ಬಂದು ಯೋಜನೆ ನಿಲ್ಲಿಸಿದ್ದಾರೆ. ರೈತರ ಸಬಲೀಕರಣದ ಯೋಜನೆ ನಿಲ್ಲಿಸಿದ್ದಾರೆ. ರೈತರ ಜೀವನಜ್ಯೋತಿ ಯೋಜನೆ ನಿಲ್ಲಿಸಿದ್ದಾರೆ. ರೈತರ ಆದಾಯ ಹೆಚ್ಚಿಸುವ ಯೋಜನೆ, ರಫ್ತು ಯೋಜನೆಗಳಿಗೂ ಅನುದಾನ ಇಲ್ಲ. ಆವರ್ತನಿಧಿಗೂ ಅನುದಾನ ಇಲ್ಲವಾಗಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ದಲಿತರ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ, ನಾವು ತಂದ ಯೋಜನೆಗಳಿಗೆ ಅನುದಾನ ನೀಡಿಲ್ಲ. ಕನಕದಾಸ, ಅಂಬೇಡ್ಕರ್ ವಸತಿನಿಲಯಕ್ಕೆ ಅನುದಾನ ಇಲ್ಲ. ಮೆಗಾ ವಸತಿ ನಿಲಯಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. 8 ಸಾವಿರ ಶಾಲಾ ಕಟ್ಟಡಕ್ಕೆ ಅನುದಾನ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು ಅನುದಾನ ಕೊಟ್ಟಿಲ್ಲ.
ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತ, ಪ್ರಗತಿ ಸ್ಥಬ್ಧವಾಗಿದೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರ ವಿಚಾರದಲ್ಲಿ ಇವರೆಲ್ಲಾ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಹಗಲು ದರೋಡೆ ರೀತಿ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ, ಸಚಿವರು ಮತ್ತು ಸಿಎಂ ಕಚೇರಿಯಲ್ಲಿ, ಭ್ರಷ್ಟಾಚಾರ ವಿಚಾರಕ್ಕೆ ಗಲಾಟೆಯಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಡಿಸಿ ಸ್ಥಾನಕ್ಕೆ ಹರಾಜು ನಡೆದಿದೆ. ಆಯಕಟ್ಟಿನ ಸ್ಥಳಕ್ಕೆ ಹರಾಜು ನಡೆಯುತ್ತಿದೆ. ಈ ರೀತಿ ಭಯ ಭೀತಿ ಇಲ್ಲದೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಯಾರಾದರೂ ಪ್ರಶ್ನೆ ಮಾಡಿದರೆ ಕೇಸು ಹಾಕುತ್ತಿದ್ದಾರೆ. ಯಾರು ದೂರು ಕೊಡುತ್ತಾರೋ ಅವರ ವಿರುದ್ಧ ಕೇಸು ಹಾಕಿ ತನಿಖೆ ಮಾಡುತ್ತಿದ್ದಾರೆ. ರಾಜ್ಯಪಾಲರಿಗೆ ದೂರು ಕೊಟ್ಟಿದ್ದಕ್ಕಾಗಿ ಗುತ್ತಿಗೆದಾರರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ನಾವು ಕೇಸು ಹಾಕಲಿಲ್ಲ, ಆದರೆ ಇವರ ವಿರುದ್ಧ ಯಾರೂ ಆಪಾದನೆ ಮಾಡಬಾರದು ಎನ್ನುವ ಧೋರಣೆ ತಳೆದಿದ್ದಾರೆ ಎಂದು ಹರಿಹಾಯ್ದರು.
ಬಿ. ಆರ್ ಪಾಟೀಲ್ ಹೆಸರಿನಲ್ಲಿ ಬಂದ ಶಾಸಕರ ಪತ್ರ ನಕಲಿ ಅಂತಾರೆ. ಆದರೆ ಬಿ. ಆರ್ ಪಾಟೀಲ್ ಕಡೆಯಿಂದಲೇ ತನಿಖೆಯಾಗಬೇಕು. ಶಾಸಕರ ಹೇಳಿಕೆ ಪಡೆದು ಸಹಿ ಮಾದರಿ ಪಡೆದು ಎಫ್ಎಸ್ಎಲ್ಗೆ ಕಳಿಸಬೇಕು. ಅದು ಬಿಟ್ಟು ವರದಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ವಿಚಾರಣೆಗೆ ಮುಂದಾಗಿದ್ದಾರೆ. ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎರಡೂ ಇಲ್ಲ. ಈ ಧೋರಣೆ ಮುಂದಾದರೆ ಜೈಲುಗಳು ಸಾಲಲ್ಲ. ಕಾನೂನು ಬಾಹಿರವಾಗಿ ಬೆಂಗಳೂರಿನಲ್ಲಿ ಎಷ್ಟು ಕ್ಲಬ್ ಮತ್ತು ಒಬ್ ಆರಂಭವಾಗಿವೆ. ನಮ್ಮ ಅವಧಿಯಲ್ಲಿ ಎಲ್ಲ ಬಂದ್ ಆಗಿತ್ತು. ಈಗ ಮತ್ತೆ ತಲೆ ಎತ್ತಿವೆ.
ಭ್ರಷ್ಟಾಚಾರದಲ್ಲಿ ಪೈಪೋಟಿ ನಡೆಯುತ್ತಿದೆ. ಕೈಗಾರಿಕೆ ಬೆಳವಣಿಗೆ ಕುಂಠಿತವಾಗಿದೆ. ಹೂಡಿಕೆಗೆ ಹೂಡಿಕೆದಾರರು ಹತ್ತು ಬಾರಿ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ರೈತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ವಪಕ್ಷ ಸಭೆಯಲ್ಲೂ ಇದನ್ನು ಹೇಳಿದೆ. ಸುಪ್ರೀಂ ಕೋರ್ಟ್ ಮುಂದೆ ಹೋಗುತ್ತೇವೆ ಎಂದವರು ಯಾಕೆ ಇನ್ನು ಹೋಗಿಲ್ಲ. ತಮಿಳುನಾಡು ಅರ್ಜಿ ಎರಡನೇ ಬಾರಿ ವಿಚಾರಣೆಗೆ ಬಂದಿದ್ದರೂ ಇವರು ಅಫಿಡವಿಟ್ ಹಾಕುವ ಹಂತದಲ್ಲಿದ್ದಾರೆ. ಮಧ್ಯಂತರ ಅರ್ಜಿಯನ್ನೂ ಹಾಕಿಲ್ಲ. ಅಂದು ನೀರು ಬಿಟ್ಟಿದ್ದೀರಿ. ಈಗಲೂ ಬಿಡುತ್ತಿದ್ದೀರಿ. ನಾಳೆ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮತ್ತೂ ಬಿಟ್ಟರೆ ನಮ್ಮ ರೈತರು ಏನು ಮಾಡಬೇಕು, ಜನ ಏನು ಮಾಡಬೇಕು ಎಂದರು.
ವಿದ್ಯುತ್ ವಿತರಣೆ ಸರಿಯಿಲ್ಲ. ರೈತರು ರಾತ್ರಿ ನಿದ್ದೆ ಮಾಡದಂತಾಗಿದೆ. ಜಲವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಕಲ್ಲಿದ್ದಲು ಕೊರತೆ ಇದೆ. ಜೀರೋ ಬಿಲ್ ಅಲ್ಲ ಜೀರೋ ವಿದ್ಯುತ್ ಆಗಲಿದೆ. ಕೆಎಸ್ಆರ್ಟಿಸಿಗೆ ವಿದ್ಯುತ್ ಪ್ರಸರಣ ನಿಗಮಗಳಿಗೆ ಹಣ ಕೊಟ್ಟಿಲ್ಲ. ಎಸ್ಸಿಎಸ್ಟಿ ಹಣ ಗ್ಯಾರಂಟಿಗೆ ಬಳಕೆ ಮಾಡಿದ್ದಾರೆ. 11 ಸಾವಿರ ಕೋಟಿ ಎಸ್ಸಿಎಸ್ಟಿಗೆ ಖೋತಾ ಆಯಿತಲ್ಲ ಅದನ್ನು ಯಾರು ಕೊಡುತ್ತಾರೆ. ಇವರು ಎಸ್ಸಿಎಸ್ಟಿ ಉದ್ದಾರಕರಾ? ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಹೇಳಿ ಹಫ್ತಾ ವಸೂಲಿಗೆ ಸೂಚಿಸಿದ್ದಾರೆ. ಕಲೆಕ್ಷನ್ಗೆ ಸೂಚಿಸಿದ್ದಾರೆ.
ಆರ್.ಟಿ.ಒಗೂ ಕಲೆಕ್ಷನ್ ಮಾಡಲು ಸೂಚಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಆಡಳಿತದ ಹಳಿ ತಪ್ಪಿದೆ. ಮಾತಿಗೆ ತಪ್ಪಿದ ಸರ್ಕಾರ ಇದು. ಎಲ್ಲಾ ಇಲಾಖೆಯಲ್ಲೂ ಕೆಲಸ ನಡೆಯುತ್ತಿಲ್ಲ. ನೀರಾವರಿ ಯೋಜನೆ ಸ್ತಬ್ಧವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ನಿಲ್ಲಿಸಿದ್ದಾರೆ. ಸರ್ಕಾರಿ ಮಾತ್ರ ಅಲ್ಲ ಇವರಿಂದ ಖಾಸಗಿ ವಲಯದ ಅಭಿವೃದ್ಧಿ ಕೂಡ ನಿಂತಿದೆ. ರಾಜ್ಯವನ್ನು ಅಧೋಗತಿಗೆ ಕೊಂಡೊಯ್ಯುವ ಸ್ಥಿತಿ ಕಾಣುತ್ತಿದೆ. ಸದನದ ಒಳಗೆ ಹೊರಗೆ ಹೋರಾಟ ನಡೆಸುತ್ತೇವೆ. ಜನರ ಧ್ವನಿಗೆ ಬಿಜೆಪಿ ಸದಾ ಇರಲಿದೆ ಎಂದರು.
ಗೃಹಲಕ್ಷ್ಮಿ ಯೋಜನೆಗೆ 1.08 ಲಕ್ಷ ಅರ್ಜಿಗಳಲ್ಲಿ ಎಷ್ಟು ಸ್ವೀಕಾರ, ಎಷ್ಟು ತಿರಸ್ಕಾರ ಎಂದು ಹೇಳಿಲ್ಲ. ಹಾಗಾಗಿ ಜನರ ಮೂಗಿಗೆ ತುಪ್ಪ ಸವರುವ ಇಂತಹ ಯೋಜನೆಗೆ ನಮ್ಮ ಬೆಂಬಲ ಇಲ್ಲ. ನಮ್ಮ ಪಕ್ಷದ ನಿಲುವು ಬಹಳ ಸ್ಪಷ್ಟ. ಅರೆಬೆಂದ ಗ್ಯಾರಂಟಿಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು.
ಅವರ ಕಾಲದ ಹಗರಣ ಎಸಿಬಿ ತನಿಖೆಯಿಂದ ಲೋಕಾಯುಕ್ತಕ್ಕೆ ವಹಿಸಲಾಗಿದೆ. ಮುಂದಿನ ದಿನದಲ್ಲಿ ಅವರ ಕಾಲದ ಹಗರಣಗಳೂ ಹೊರಬರಲಿವೆ. ಪ್ರತಿಪಕ್ಷ ನಾಯಕ ಶೆಟ್ಟರ್ ಅಲ್ಲಿ ಹೋದ ಮೇಲೆ ಆ ಸಂಗೀತ ಕಚೇರಿಯನ್ನೇ ಹಾಡಬೇಕು. ಹಾಗಾಗಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕೂರುವುದು ಹೊಸತೇನಲ್ಲ. ಎಲ್ಲರೂ ವಿಪಕ್ಷ ನಾಯಕರೇ. ಎಲ್ಲರೂ ಸಮರ್ಥವಾಗಿ ಸದನದ ಒಳಗೆ ಕೆಲಸ ಮಾಡಿದ್ದಾರೆ. ಇಡೀ ಪಕ್ಷ ವಿಪಕ್ಷವಾಗಿ ಕೆಲಸ ಮಾಡಿದೆ. ಸಾಕಷ್ಟು ಕಾರಣದಿಂದ ವಿಪಕ್ಷ ನಾಯಕರ ನೇಮಕ ವಿಳಂಬವಾಗಿದೆ. ಆದರೆ, ಆದಷ್ಟು ಬೇಗ ನೇಮಕವಾಗಲಿದೆ. ಅವರು 135 ಶಾಸಕರಿದ್ದರೂ ಸರ್ಕಾರಕ್ಕೆ ಸ್ಥಿರತೆ ಇಲ್ಲ. ಅಸಮಾಧಾನ ಇದೆ. ಹಾಗಾಗಿ ವಿರೋಧ ಪಕ್ಷದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಾಂಗ್ರೆಸ್ನದ್ದು ಮೋಸದ ಗ್ಯಾರಂಟಿ, ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ಪಕ್ಕಾ: ಮಾಜಿ ಸಚಿವ ಈಶ್ವರಪ್ಪ ಭವಿಷ್ಯ