ಬೆಂಗಳೂರು : ಸವಿತಾ ಸಮುದಾಯದ ಪ್ರಮುಖ ಮುಖಂಡ ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆಯಾಗಿರುವುದು ಶೋಷಿತ, ಅಶಕ್ತ ಸಮುದಾಯಕ್ಕೆ ಸಿಕ್ಕ ಮಾನ್ಯತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂದ ಗೆಲವು ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಎನ್ ಸಂಪತ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸವಿತಾ ಸಮಾಜಕ್ಕೆ ಸೇರಿದ ಹಿರಿಯ ನಾಯಕ ರಾಯಚೂರಿನ ಬಿಜೆಪಿ ಮುಖಂಡ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಯ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿದೆ. ಈವರೆಗೆ ಸವಿತಾ ಸಮಾಜಕ್ಕೆ ಸೇರಿದ ಕರ್ನಾಟಕದ ಯಾರೊಬ್ಬರೂ ಇಂತಹ ಹುದ್ದೆಗೆ ಆಯ್ಕೆಯಾಗಿಲ್ಲ. ರಾಜಕೀಯವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ಬಿಜೆಪಿ ನಾಯಕತ್ವ ಮಾನ್ಯತೆ ನೀಡಿರುವುದು ಬಹಳ ಸಂತಸದ ವಿಷಯ.
ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಸೇರಿ ಎಲ್ಲಾ ನಾಯಕರಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದಿದ್ದಾರೆ.
ಅದೇ ರೀತಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಸಂಘಪರಿವಾರ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಅಶೋಕ ಗಸ್ತಿ ಅವರಿಗೆ ಅಭಿನಂದನೆಗಳು. ತೀರಾ ಹಿಂದುಳಿದ ಸವಿತಾ ಸಮಾಜದ ಮುಖಂಡರಾಗಿ ಸಮಾಜದ ಏಳ್ಗೆಗಾಗಿ ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತಾವು ಈಗ ದೊರೆತಿರುವ ಸದವಕಾಶ ಬಳಸಿಕೊಂಡು ಸಮಾಜದ ಒಳಿತಿಗೆ ಶ್ರಮಿಸುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.