ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಸದನದ ಕಲಾಪದಿಂದ ಹತ್ತು ಮಂದಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ಪ್ರತಿಯೊಂದರಲ್ಲೂ ದರ ಏರಿಸಿದೆ. ಹಾಲಿನ ದರ, ಮಾರ್ಗಸೂಚಿ ದರ, ವಾಹನ ನೋಂದಣಿ ತೆರಿಗೆ, ಅಬಕಾರಿ, ವಿದ್ಯುತ್ ಹೀಗೆ ಎಲ್ಲದರ ದರ ಹೆಚ್ಚಿಸಲಾಗಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ. ವರ್ಗಾವಣೆ ದಂಧೆ ಜೋರಾಗಿ ನಡೀತಿದೆ. ಹರಾಜಿನಲ್ಲಿ ವರ್ಗಾವಣೆ ದಂಧೆ ಮಾಡ್ತಿದ್ದಾರೆ. ಕೆಎಂಎಫ್ ನಲ್ಲಿ ಅಕ್ರಮ ತಡೆಯದೇ ಹಾಲಿನ ದರ ಹೆಚ್ಚಿಸಿದ್ದಾರೆ. ದರ ಏರಿಕೆ ಮೂಲಕ ದರೋಡೆ ಮಾಡ್ತಿದಾರೆ. ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲಾಗಿದೆ ಎಂದು ವಾಗ್ವಾಳಿ ನಡೆಸಿದರು.
ಪಿಎಸ್‌ಐ ಅಕ್ರಮ ನೇಮಕಾತಿ ತನಿಖೆ ಮಾಡಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ. ಪಾರದರ್ಶಕ ತನಿಖೆ ನಡೆಯಲಿ. ಈ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮದ ಫಲಾನುಭವಿಗಳಿದ್ದಾರೆ. ಸಿದ್ದರಾಮಯ್ಯ ಹಿಂದಿನ ತಮ್ಮ ಕಾಲದ ಪಿಎಸ್‌ಐ ಅಕ್ರಮವನ್ನೂ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಅವರೇ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು. ಅವರು ನಿಜವಾಗಿಯೂ ಮುಖ್ಯಮಂತ್ರಿಗಳನ್ನು ಕಿತ್ತೆಸೆಯುವ ಕೆಲಸ ಮಾಡಿದರೆ ಒಳ್ಳೆಯದು. ಆ ಕೆಲಸ ಅವರಾದರೂ ಮಾಡಲಿ, ಜನರಾದರೂ ಮಾಡಲಿ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಲಿ ಎಂದು ಗುಡುಗಿದರು.
ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರು ದಲಿತ ಪ್ರೀತಿ ಎನ್ನುತ್ತಾರೆ. ಅವರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿ ಪ್ರೇಮ ಇದ್ರೆ ಡಾ. ಜಿ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ನೋಡೋಣ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಒಬ್ಬ ಬಡವರ ವಿರೋಧಿ. ಬಡವರ ಬದುಕು ಪುಟ್ಪಾತ್ ಆಗಿದೆ. ಮನೆ ಯಜಮಾನನಿಗೆ ನಾವು ಬೇರೆ ಬೇರೆ ರೂಪದಲ್ಲಿ ಎರಡು ಸಾವಿರ ಕೊಡುತ್ತಿದ್ದೆವು. ಆದರೆ ಇವರು ಮನೆ ಒಡೆಯುವ ಕೆಲಸ ಮಾಡಿದ್ರು. ಸಿದ್ದರಾಮಯ್ಯ ನಾನೇ ಸೂರ್ಯ ಎಂದುಕೊಂಡಿದ್ದಾರೆ. ನೀವು ಸೂರ್ಯ ಅಲ್ಲ. ನೀವು ಕತ್ತಲು. ಬಡವರು 200 ಯುನಿಟ್ ಫ್ರೀ ಎಂದು ಘೋಷಣೆ ಮಾಡಿದ ತಕ್ಷಣ, ಜನರು ಫ್ರಿಡ್ಜ್ , ಇಸ್ತ್ರಿ ಪೆಟ್ಟಿಗೆ, ಸ್ಟೌವ್ ತಗೊಂಡ್ರು ಎಂದು ವ್ಯಂಗ್ಯವಾಡಿದರು.
ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾತನಾಡಿ, ಬಿ ಕೆ ಹರಿಪ್ರಸಾದ್ ಅವರು ಸತ್ಯವನ್ನು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಬೇಕು ಅಂದಾಗ ಮಾತ್ರ ಅಹಿಂದ ನೆನಪಾಗುತ್ತದೆ. ಅಧಿಕಾರ ಸಿಕ್ಕ ಬಳಿಕ ಅಹಿಂದ ವರ್ಗ ಮರೀತಾರೆ. ಸಿದ್ದರಾಮಯ್ಯ ಒಂದೇ ಧರ್ಮದ ಓಲೈಕೆ ಮಾಡ್ಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಒನ್ ವೇನಲ್ಲಿ ಹೋಗ್ತಿದಾರೆ. ಹಲವು ಸಣ್ಣ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಒಬಿಸಿ ಮತ್ತು ಅಹಿಂದ ಹೇಳಿಕೊಂಡು ಅವರ ಅವಧಿಯಲ್ಲಿ ಒಬಿಸಿ ಆಯೋಗ ಮಾಡಲೇ ಇಲ್ಲ ಎಂದು ಆಪಾದಿಸಿದರು.
ಸಿದ್ದರಾಮಯ್ಯ ಅವರದ್ದು ಮತಬೇಟೆ, ವೋಟ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಬಿ ಕೆ ಹರಿಪ್ರಸಾದ್ ದೆಹಲಿ ರಾಜಕಾರಣವನ್ನು ಹತ್ತಿರದಿಂದ ನೋಡಿರುವವರು. ಸಿಎಂ ಕೆಳಗಿಳಿಸೋದೂ ಗೊತ್ತು ಮೇಲೇರಿಸೋದು ಗೊತ್ತು ಅಂದಿದ್ದಾರೆ. ಹರಿಪ್ರಸಾದ್ ಅವರು ಸತ್ಯವನ್ನೇ ಮಾತಾಡಿದ್ದಾರೆ. ಹಲವರ ಮನಸಲ್ಲಿರೋದನ್ನೇ ಹರಿಪ್ರಸಾದ್ ಹೇಳಿದ್ದಾರೆ ಎಂದು ಕುಟುಕಿದರು.
ಪಿಎಸ್‌ಐ ಅಕ್ರಮ ನೇಮಕಾತಿ ನ್ಯಾಯಾಂಗ ತನಿಖೆ ವಿಚಾರಕ್ಕೆ ಮಾತನಾಡಿದ ಅವರು, ಅವರದ್ದೇ ಸರ್ಕಾರ ತನಿಖೆಗೆ ಕೊಟ್ಟಿದೆ. ತನಿಖೆ ಬಳಿಕ ಅದರ ವರದಿಯನ್ನೂ ಸರ್ಕಾರ ಜನರ ಮುಂದಿಡಬೇಕಾಗುತ್ತದೆ. ಪಾರದರ್ಶಕವಾಗಿ, ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡಲಿ ಸರ್ಕಾರದ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದರು.
ಬೆಂಗಳೂರು ಪೊಲೀಸ್ ಕಮೀಷನರ್ನ್ನು ಮುಸ್ಲಿಂ ಸಮುದಾಯದವರನ್ನು ಮಾಡ್ತೇನೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ರು. ಆದರೆ ಬೈರತಿ ಸುರೇಶ್ , ಯತೀಂದ್ರ ಸಿದ್ದರಾಮಯ್ಯ ಬೇರೆ ಸಮುದಾಯದವರನ್ನು ಮಾಡಿದ್ರು. ಮತ ಹಾಕುವಾಗ ಮಾತ್ರ ಮುಸ್ಲಿಮರು ಬೇಕು. ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆಯಿಂದ ಕೋಟ್ಯಂತರ ರೂಪಾಯಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.