ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನಮುನಿಗಳ ಅಮಾನುಷ ಹತ್ಯೆ, ಮೈಸೂರು ಜಿಲ್ಲೆಯಲ್ಲಿ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ನಾಯಕ ಹತ್ಯೆ ಪ್ರಕರಣಗಳನ್ನು ಖಂಡಿಸಿ ಇಂದು ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಬಳಿಕ ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಜಿ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೊಲೆಗಳ ಭಾಗ್ಯ ನೀಡಿದ ಕೊಲೆಗಡುಕ ಸರ್ಕಾರವೆಂದು ಕಿಡಿಕಾರಿದರು. ಜೈನಮುನಿಗಳನ್ನು ಅಮಾನುಷವಾಗಿ ಕೊಂದವರಿಗೆ ಗಲ್ಲು ಶಿಕ್ಷೆ ವಿಧಿಸಿ, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಧಿಕ್ಕಾರ ಮೊಳಗಿಸಿ ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಜೈನಮುನಿಗಳ ಬರ್ಬರ ಹತ್ಯೆ ಹಾಗೂ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ನಾಯಕ ಹತ್ಯೆ ಪ್ರಕರಣಗಳು ನಿದರ್ಶನ" ಎಂದು ವಾಗ್ದಾಳಿ ನಡೆಸಿದರು. "ಉಭಯ ಸದನಗಳಲ್ಲಿಯೂ ನಾವು ಹೋರಾಟ ನಡೆಸಿದ್ದೇವೆ. ಪ್ರಕರಣ ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದ್ದೇವೆ. ಆದರೂ ಸರ್ಕಾರ ಮೊಂಡುತನ ಪ್ರದರ್ಶಿಸಿದೆ" ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇಬ್ಬರು ಟೆಕ್ಕಿಗಳ ಕೊಲೆಯಾಗಿದೆ. ಕೊಲೆ ಮಾಡಿದ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುತ್ತಾನೆ. ಕೊಲೆಗಡುಕರಿಗೆ ಯಾವುದೇ ಭಯ ಇಲ್ಲ. ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವ್ಯವಹಾರ ತಡೆಯಲು ಹೋಗಿದ್ದ ಪೊಲೀಸ್ ಅಧಿಕಾರಿಯನ್ನೆ ಕೊಲೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸರ್ಕಾರದ ಮುಂದೆ ತಲೆಬಾಗಿ ನಿಂತಿದ್ದಾರೆ. ಹೀಗಾಗಿ ಕೊಲೆಗಡುಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ದಪ್ಪ ಚರ್ಮದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾನೂನು ಸುವ್ಯವಸ್ಥೆ ಕಲ್ಪಿಸಲು ಡಿಜಿ ಐಜಿಯನ್ನು ಕರೆಸಿಕೊಂಡು ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ. ಅವರು ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಮಾತನಾಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ರೀತಿಯ ಸೂಚನೆ ನೀಡುತ್ತಾರೆ ನೋಡಿಕೊಂಡು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ರಾಜ್ಯಪಾಲರಿಗೆ ದೂರು: ಪ್ರತಿಭಟನೆಯ ನಂತರ ಪ್ರದರ್ಶನ ಫಲಕಗಳನ್ನು ಹಿಡಿದು, ಕೊಲೆಪಾತಕರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸುತ್ತಾ ಪಾದಯಾತ್ರೆಯಲ್ಲಿ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿದ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಜೈನಮುನಿಗಳ ಭೀಕರ ಹತ್ಯೆ ಮರುದಿನವೇ ಹಿಂದೂ ಕಾರ್ಯಕರ್ತನ ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಆರೋಪಿಸಿದರು. ಕೊಲೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಯ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಕೋರಿದರು.
ಮಾಜಿ ಸಚಿವರಾದ ಆರ್. ಅಶೋಕ್, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಪಕ್ಷದ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ, ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ಹಿರೇಕೋಡಿ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕುತಂತ್ರದ ಕೈವಾಡ: ಕೃಷ್ಣ ಭಟ್ ಆರೋಪ