ಬೆಂಗಳೂರು: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ ಕುರಿತು ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೂರು ತಿಂಗಳಿಂದ ನಾವಿಕನಿಲ್ಲದ ಪಕ್ಷ. ಅಧ್ಯಕ್ಷರನ್ನೇ ಮಾಡೋಕೆ ಆಗದ ಕಾಂಗ್ರೆಸ್‌ನವರು ನಮ್ಗೆ ಹೇಳ್ತಾರೆ. ನಮ್ಮ ವಿಚಾರ ನಾವು ಮಾಡ್ತೇವೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟದ್ದು, ಅವರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅಧಿಕಾರ ಕಳೆದುಕೊಂಡ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಂಗಳೂರು ಬಾಂಬ್ ಪ್ರಕರಣದಲ್ಲಿ ಪೊಲೀಸರನ್ನೇ ಅನುಮಾನಿಸುವಂತೆ ಮಾತನಾಡಿದ್ರು. ಕೊನೆಗೆ ಆರ್ಎಸ್ಎಸ್ ಮತ್ತು ಬಿಜೆಪಿ ಕಾರಣ ಎಂಬ ರೀತಿ ಮಾತಾಡ್ತಿದ್ದಾರೆ. ಅನುಮಾನ ಇದ್ದರೆ ಸರ್ಕಾರಕ್ಕೆ ಹೇಳಲಿ. ನಾವು ಬೇಕಾದರೆ ತನಿಖೆ ಮಾಡಿಸೋಣ ಎಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್, ಕುಮಾರಸ್ವಾಮಿ ಮನಸೋ ಇಚ್ಛೆ ಮಾತಾಡ್ತಿದಾರೆ ಅಂತಾ ಕಿಡಿಕಾರಿದರು.